ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸದ್ಯ ಮೈದಾನದ ಹೊರಗಿನ ವೈಯಕ್ತಿಕ ವಿಚಾರಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿರುವ ಚಹಲ್, ಈಗ ಗ್ಲಾಮರ್ ಮತ್ತು ಮನರಂಜನಾ ಲೋಕದ (Showbiz) ಪ್ರಮುಖ ಚರ್ಚಾ ವಿಷಯವಾಗಿದ್ದಾರೆ.
ಧನಶ್ರೀ ವರ್ಮಾ ಜೊತೆಗಿನ ವಿವಾಹ ಬಂಧನ ಅಂತ್ಯ ಚಹಲ್ ಮತ್ತು ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ 2020ರ ಡಿಸೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಸಾಕಷ್ಟು ಫೇಮಸ್ ಆಗಿತ್ತು. ಆದರೆ 2022ರಲ್ಲಿ ಇವರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅಂತಿಮವಾಗಿ ಮಾರ್ಚ್ 2025ರಲ್ಲಿ ಈ ದಂಪತಿ ಪರಸ್ಪರ ಒಪ್ಪಿಗೆಯೊಂದಿಗೆ ಮುಂಬೈ ಕೌಟುಂಬಿಕ ನ್ಯಾಯಾಲಯದಿಂದ ಅಧಿಕೃತವಾಗಿ ವಿಚ್ಛೇದನ ಪಡೆದರು. ಸುಮಾರು 4.75 ಕೋಟಿ ರೂ. ಜೀವನಾಂಶದೊಂದಿಗೆ ಇಬ್ಬರೂ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.
ಆರ್ಜೆ ಮಹ್ವಶ್ ಜೊತೆಗಿನ ನಂಟು ಮತ್ತು ಇತ್ತೀಚಿನ ಅನ್ ಫಾಲೋ ಡ್ರಾಮಾ ಧನಶ್ರೀ ಅವರಿಂದ ಬೇರ್ಪಟ್ಟ ನಂತರ ಚಹಲ್ ಹೆಸರು ಖ್ಯಾತ ಆರ್ಜೆ ಮತ್ತು ಪ್ರಭಾವಿ ವ್ಯಕ್ತಿ ಮಹ್ವಶ್ (RJ Mahvash) ಜೊತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಐಪಿಎಲ್ ಪಂದ್ಯಗಳ ವೇಳೆ ಮಹ್ವಶ್ ಅವರು ಚಹಲ್ ಅವರ ಪಂಜಾಬ್ ಕಿಂಗ್ಸ್ ತಂಡವನ್ನು ಹುರಿದುಂಬಿಸುತ್ತಿದ್ದರು. ಆದರೆ ಈ ಸಂಬಂಧದ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ.
ಆದರೆ ಕಳೆದ ಕೆಲವು ದಿನಗಳಿಂದ ಇವರಿಬ್ಬರ ಸಂಬಂಧ ಮುರಿದುಬಿದ್ದಿದೆ ಎಂಬ ವದಂತಿಗಳು ಹರಡಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಚಹಲ್ ಮತ್ತು ಮಹ್ವಶ್ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಚಹಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ “ಎಲ್ಲರಿಗೂ ವಿವರಣೆ ನೀಡುವ ಅಗತ್ಯವಿಲ್ಲ, ಮೌನವಾಗಿರುವುದು ಒಳಿತು” ಎಂಬ ಅರ್ಥದ ಪೋಸ್ಟ್ ಹಂಚಿಕೊಂಡಿದ್ದರು. ಇತ್ತ ಮಹ್ವಶ್ ಕೂಡ ತಮ್ಮ ಬದುಕನ್ನು ಸರಿಪಡಿಸಿಕೊಳ್ಳುವ (Fixing my life) ಕುರಿತು ಪೋಸ್ಟ್ ಹಾಕುವ ಮೂಲಕ ಈ ವದಂತಿಗಳಿಗೆ ಪುಷ್ಟಿ ನೀಡಿದ್ದಾರೆ.
ಗ್ಲಾಮರ್ ಲೋಕದಲ್ಲಿ ಫೇಮಸ್ ಆಗಿದ್ದೇಗೆ? ಕ್ರಿಕೆಟ್ ಮೈದಾನದಲ್ಲಿ ಸ್ಪಿನ್ ಮೋಡಿ ಮಾಡಿದ್ದ ಚಹಲ್, ಶೋಬಿಸಿನ ಬೆಡಗಿಯರ ಜೊತೆಗಿನ ಸತತ ನಂಟು ಮತ್ತು ವೈಯಕ್ತಿಕ ಬದುಕಿನ ಏರಿಳಿತಗಳಿಂದಾಗಿ ಮನರಂಜನಾ ಸುದ್ದಿಗಳಲ್ಲೂ ಮುಂಚೂಣಿಗೆ ಬಂದಿದ್ದಾರೆ. ಕ್ರೀಡಾ ಅಭಿಮಾನಿಗಳ ಜೊತೆಗೆ ಈಗ ಗ್ಲಾಮರ್ ಲೋಕದ ವೀಕ್ಷಕರೂ ಚಹಲ್ ಅವರ ಜೀವನದ ಮುಂದಿನ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.




