HomeKarnatakaದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಂಪರೆ ಸದಾ ಪ್ರಸ್ತುತ: ಸಚಿವ ಶಿವರಾಜ್. ಎಸ್‌.ತಂಗಡಗಿ ಅಭಿಮತ

ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಂಪರೆ ಸದಾ ಪ್ರಸ್ತುತ: ಸಚಿವ ಶಿವರಾಜ್. ಎಸ್‌.ತಂಗಡಗಿ ಅಭಿಮತ

ಬೆಂಗಳೂರು-ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಶೋಷಿತರು, ಹಿಂದುಳಿದ, ಬಡವರು ಹಾಗೂ ಅವಕಾಶ ವಂಚಿತರ ಧ್ವನಿಯಾಗಿ ಸಾಮಾಜಿಕ ಪರಿವರ್ತನೆಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.

111ನೇ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ

ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಪಿ.ವಿ.ನಂಜರಾಜ ಅರಸ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಅಧಿಕಾರವೆಂದರೆ ಕೇವಲ ಆಡಳಿತ ನಡೆಸುವ ಸಾಧನವಲ್ಲ; ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ, ಗೌರವ ಮತ್ತು ಸಮಾನ ಹಕ್ಕುಗಳನ್ನು ತಲುಪಿಸುವ ಜವಾಬ್ದಾರಿ ಎಂಬುದನ್ನು ಅರಸು ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂ ಸುಧಾರಣೆ: ಅರಸು ಆಡಳಿತದ ಮಹತ್ವದ ಮೈಲಿಗಲ್ಲು

ಭೂ ಸುಧಾರಣೆ ದೇವರಾಜ ಅರಸು ಅವರ ಆಡಳಿತದ ಪ್ರಮುಖ ಮೈಲಿಗಲ್ಲು‌ ಆಗಿತ್ತು. ‘ಉಳುವವನೇ ಭೂಮಿಯ ಒಡೆಯ’ ಎಂಬ ಆಶಯಕ್ಕೆ ಬಲ ತುಂಬುವ ಮೂಲಕ ತಲೆತಲಾಂತರಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ಹಕ್ಕು ದೊರೆಯುವಂತೆ ಮಾಡಿದರು. ಇದರಿಂದ ಗ್ರಾಮೀಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಉಂಟಾಯಿತು ಎಂದು ಹೇಳಿದರು.

ಶೈಕ್ಷಣಿಕ- ಆರ್ಥಿಕ ಪ್ರಗತಿಗೆ ಆದ್ಯತೆ:

ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಆದ್ಯತೆ

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಅರಸು ಅವರು ವಿಶೇಷ ಆದ್ಯತೆ ನೀಡಿದ್ದರು. ಸಮಾನ ಅವಕಾಶ ಕಲ್ಪಿಸಲು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳಿಗೆ ಅವಕಾಶ ದೊರೆಯಬೇಕು ಎಂಬ ಅವರ ನಿಲುವು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ನೀತಿಗಳಿಗೆ ಬಲವಾದ ಅಡಿಪಾಯ ಹಾಕಿತು ಎಂದು ಅವರು ವಿವರಿಸಿದರು.

ತಂತ್ರಜ್ಞಾನದ ಅಭಿವೃದ್ಧಿ ವಿಚಾರದಲ್ಲೂ ಅರಸು ಸಾಕಷ್ಟು ಆಸಕ್ತಿ ಹೊಂದಿದ್ದರು. ಅದರಂತೆ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಗಿದ್ದ ಅರಸು ಅವರ ಶ್ರಮದಿಂದಾಗಿ. ಅಷ್ಟು ಮಾತ್ರವಲ್ಲ, ಮಲಹೊರುವ ಪದ್ಧತಿ ನಿಷೇಧ ಪದ್ಧತಿ ಜಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ನೂರಾರು ಅತ್ಯುತ್ತಮ ಯೋಜನೆಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.

ಬಡವರು ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಲು ಅರಸು ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಶಿಕ್ಷಣವೇ ಸಾಮಾಜಿಕ ಪರಿವರ್ತನೆಯ ಅತ್ಯಂತ ಪರಿಣಾಮಕಾರಿ ಸಾಧನ ಎಂಬುದನ್ನು ಅವರು ಅರಿತಿದ್ದರು.

ಅರಸು ಆಶಯಗಳು ಇಂದಿಗೂ ಪ್ರಸ್ತುತ

ಅರಸು ಅವರ ಆಡಳಿತ ಇಂದಿಗೂ ಪ್ರಸ್ತುತ: ದೇವರಾಜ ಅರಸು ಅವರ ಆಡಳಿತದ ಆಶಯಗಳು ಇಂದಿಗೂ ಪ್ರಸ್ತುತವಾಗಿವೆ. ಅಭಿವೃದ್ಧಿಯ ಫಲ ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪಬೇಕು. ಬಡತನದಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು, ರೈತರು ತಮ್ಮ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ಪಡೆಯಬೇಕು ಹಾಗೂ ಯುವಜನರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಚಿಂತನೆಯ ಮೂಲ ಆಶಯವಾಗಿತ್ತು ಎಂದು ಸಚಿವರು ತಿಳಿಸಿದರು.

ದೇವರಾಜ ಅರಸು ಅವರನ್ನು ಸ್ಮರಿಸುವುದು ಕೇವಲ ಜಯಂತಿ ಆಚರಣೆ ಅಥವಾ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದಕ್ಕೆ ಸೀಮಿತವಾಗಬಾರದು. ಅವರ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸರ್ವರ ಅಭಿವೃದ್ಧಿಯ ವಿಚಾರಗಳನ್ನು ಅಳವಡಿಸಿಕೊಂಡು ದುರ್ಬಲ ವರ್ಗಗಳ ಬದುಕಿನಲ್ಲಿ ಬದಲಾವಣೆ ತರುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಚಿವರು ಅಭಿಪ್ರಾಯಪಟ್ಟರು.

ಡಿ. ದೇವರಾಜ ಅರಸು ಅವರ ಜೀವನ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರುತ್ತದೆ. ಅವರ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶಕವಾಗಲಿ ಹಾಗೂ ಸಮಾನತೆ, ಸ್ವಾಭಿಮಾನ ಮತ್ತು ಸರ್ವರ ಅಭಿವೃದ್ಧಿಯ ಕರ್ನಾಟಕ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಸಚಿವರು ಆಶಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular