ಇತ್ತೀಚಿನ ದಿನಗಳಲ್ಲಿ ಸಾಫ್ಟ್‌ವೇರ್ ಕಂಪನಿ ಅಥವಾ ಆಫೀಸ್‌ಗಳಲ್ಲಿ ಡೆಸ್ಕ್ ಜಾಬ್ (Desk Jobs) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಒಂದೇ ಕಡೆ ಕೂತು ಕೆಲಸ ಮಾಡುವುದು, ಮೀಟಿಂಗ್‌ಗಳು ಮತ್ತು ಡೆಡ್‌ಲೈನ್‌ಗಳ ನಡುವೆ ಸಿಲುಕಿ ದೇಹಕ್ಕೆ ಯಾವುದೇ ಮೂವ್‌ಮೆಂಟ್ ಇಲ್ಲದಂತಾಗುವುದು ಸಾಮಾನ್ಯವಾಗಿದೆ. ಆದರೆ, ಈ ರೀತಿ ದೀರ್ಘಕಾಲ ಕೂರುವುದರಿಂದ ನಮ್ಮ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ.
ಹಾಗಾದರೆ, ದಿನಕ್ಕೆ ಎಷ್ಟು ಗಂಟೆ ಕೂರಬಹುದು? ಎಷ್ಟು ಸಮಯಕ್ಕೊಮ್ಮೆ ಬ್ರೇಕ್ ತಗೋಬೇಕು? ಇದಕ್ಕೆ ಪ್ರಖ್ಯಾತ ವೈದ್ಯರಾದ ಡಾ. ರೆಡ್ಡಿ ಅವರು ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ:
ಡಾ. ರೆಡ್ಡಿ ಅವರ ಪ್ರಕಾರ, ದಿನಕ್ಕೆ 6 ರಿಂದ 8 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೂರುವುದರಿಂದ ಮೂಳೆ, ಕೀಲು ಮತ್ತು ಸ್ನಾಯುಗಳ ಸಮಸ್ಯೆಗಳು (Musculoskeletal problems) ಎದುರಾಗುತ್ತವೆ. ಇಷ್ಟೇ ಅಲ್ಲದೆ, ಕಡಿಮೆ ಸಮಯ ಕೂತರೂ ಸಹ, ಯಾವುದೇ ಮೂವ್‌ಮೆಂಟ್ ಇಲ್ಲದೆ ಒಂದೇ ಭಂಗಿ (Posture) ಯಲ್ಲಿ ದೀರ್ಘಕಾಲ ಇರುವುದು ಕುತ್ತಿಗೆ, ಬೆನ್ನು, ಬೆನ್ನುಮೂಳೆ ಮತ್ತು ಕೀಲುಗಳ ಮೇಲಿನ ಒತ್ತಡವನ್ನು ದುಪ್ಪಟ್ಟು ಮಾಡುತ್ತದೆ.
3:1 ಅನುಪಾತದ ನಿಯಮ (The 3:1 Ratio):
ಕೂರುವ ಮತ್ತು ನಿಲ್ಲುವ ಸಮಯದ ನಡುವೆ ಆರೋಗ್ಯಕರ ಸಮತೋಲನ ಇರಬೇಕು. ಇದಕ್ಕಾಗಿ ಪ್ರತಿ 30–45 ನಿಮಿಷಗಳ ಕೂರುವಿಕೆಗೆ, ಕನಿಷ್ಠ 10–15 ನಿಮಿಷಗಳ ಕಾಲ ನಿಲ್ಲುವುದು, ನಡುಗಾಡುವುದು ಅಥವಾ ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸುವುದು ಅತ್ಯಗತ್ಯ.
ಇದಕ್ಕಾಗಿ ಕೆಲಸ ನಿಲ್ಲಿಸಬೇಕಾಗಿಲ್ಲ; ಫೋನ್ ಕರೆಗಳು ಬಂದಾಗ ಎದ್ದು ನಿಂತು ಮಾತನಾಡಬಹುದು, ಸಹೋದ್ಯೋಗಿಗಳಿಗೆ ಮೆಸೇಜ್ ಮಾಡುವ ಬದಲು ಅವರಿದ್ದ ಜಾಗಕ್ಕೆ ನಡೆದುಕೊಂಡು ಹೋಗಿ ಮಾತನಾಡಬಹುದು ಅಥವಾ ಡೆಸ್ಕ್ ಬಳಿಯೇ ನಿಂತು ಸಣ್ಣದಾಗಿ ಸ್ಟ್ರೆಚ್ ಮಾಡಬಹುದು.
ಪ್ರತಿ 30 ನಿಮಿಷಕ್ಕೊಮ್ಮೆ ಸಣ್ಣ ಬ್ರೇಕ್:
ಪ್ರತಿ 30 ರಿಂದ 45 ನಿಮಿಷಗಳಿಗೊಮ್ಮೆ ಕನಿಷ್ಠ 1 ರಿಂದ 2 ನಿಮಿಷಗಳ ಕಾಲ ಸಣ್ಣ ಮೂವ್‌ಮೆಂಟ್ ಬ್ರೇಕ್ ತೆಗೆದುಕೊಳ್ಳಿ. ಈ ಸಮಯದಲ್ಲಿ ಕುತ್ತಿಗೆಯನ್ನು ತಿರುಗಿಸುವುದು, ಭುಜಗಳನ್ನು ರೌಂಡ್ ಮಾಡುವುದು (Shoulder rolls), ಮತ್ತು ಸಣ್ಣದಾಗಿ ವಾಕ್ ಮಾಡುವುದರಿಂದ ಬೆನ್ನುಮೂಳೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಸರಿಯಾದ ಭಂಗಿ (Ergonomics) ಕಾಯ್ದುಕೊಳ್ಳಿ:
ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸ್ಕ್ರೀನ್ ನಿಮ್ಮ ಕಣ್ಣಿನ ನೇರಕ್ಕೆ ಇರಲಿ. ಕೂತಾಗ ಪಾದಗಳು ನೆಲಕ್ಕೆ ಸಮನಾಗಿರಲಿ ಮತ್ತು ಗೂನು ಬೆನ್ನು ಮಾಡಿ (Slouching) ಕೂರುವುದನ್ನು ಸಂಪೂರ್ಣವಾಗಿ ತಪ್ಪಿಸಿ.

