ಹಾವೇರಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಜ್ಯುವೆಲ್ಲರಿ ಶಾಪ್ ಮಾಲಿಕರ ಮಗನೊಬ್ಬ ಸರ್ಕಾರಿ ವಾಹನದಲ್ಲಿ ಗನ್ ಹಿಡಿದು ರೀಲ್ಸ್ ಗೆ ಪೋಸ್ ನೀಡಿದ ಘಟನೆ ಬೆನ್ನಲ್ಲೇ ಇತ್ತ ಹಾವೇರಿಯಲ್ಲಿ ಡೆಪ್ಯೂಟಿ ಸ್ಪೀಕರ್ ಪುತ್ರನೇ ತಂದೆಯ ಸರ್ಕಾರಿ ವಾಹನದಲ್ಲಿ ಬೆಂಬಲಿಗರ ಜೊತೆ ರೌಂಡ್ಸ್ ಹೊಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅತ್ತ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ತಂದೆಯ ಸರ್ಕಾರಿ ಕಾರಿನಲ್ಲಿ ದರ್ಬಾರ್ ನಡೆಸುತ್ತಿದ್ದಾರೆ.
ಹಾವೇರಿಯಲ್ಲಿ ದರ್ಶನ್ ಲಮಾಣಿ ತಂದೆಯ ಸರ್ಕಾರಿ ವಾಹನದಲ್ಲಿ ಬೆಂಬಲಿಗರು ಜೊತೆ ಸುತ್ತಾಟ ನಡೆಸಿ, ದರ್ಬಾರ್ ನಡೆಸುತ್ತಿದಾರೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಲಮಾಣಿ, ಡೆಪ್ಯೂಟಿ ಸ್ಪೀಕರ್ ವಾಹನದಲ್ಲಿ ಓಡಾಡುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.