ದೆಹಲಿ ಪ್ರವಾಸದಿಂದ ವಾಪಸ್ ಆಗಿರುವ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗೆ ದೆಹಲಿಯಲ್ಲಿಯೇ ಡಿ.ಕೆ.ಶಿವಕುಮಾರ್ ಫುಲ್ ಸ್ಟಾಪ್ ಹಾಕಿ ಬಂದಿದ್ದಾರೆ.
ಗುರುವಾರ ಬೆಂಗಳೂರಿನ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಹಲವು ಹೊತ್ತು ಎಐಸಿಸಿ ಅಧ್ಯಕ್ಷರ ಜೊತೆ ಅವರು ಮಾತುಕತೆಯನ್ನು ನಡೆಸಿದರು. ಡಿಸೆಂಬರ್ 27ರಂದು ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆ ಇದ್ದು, ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ಖರ್ಗೆ ಭೇಟಿ ಮಾಡಿದರು.
ಡಿ.ಕೆ.ಶಿವಕುಮಾರ್ ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಿದ್ದರು. ಜಲಸಂಪನ್ಮೂಲ ಸಚಿವಾಲಯದ ಸಭೆ ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಸಹ ನಡೆಸಿದ್ದರು.
ಬುಧವಾರ ಅವರು ಹೈಕಮಂಡ್ ನಾಯಕರ ಭೇಟಿಗೆ ಪ್ರಯತ್ನವನ್ನು ನಡೆಸಿದ್ದರು. ಆದರೆ ಭೇಟಿ ಸಾಧ್ಯವಾಗಿರಲಿಲ್ಲ. ಆದ್ದರಿಂದ ಬೆಂಗಳೂರು ನಗರಕ್ಕೆ ವಾಪಸ್ ಆಗಿದ್ದರು. ಈಗ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಡಿಕೆಶಿ ಹೇಳಿದ್ದೇನು?: ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, “ಡಿಸೆಂಬರ್ 27ರಂದು ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳಿಗೆ ಸಭೆಗೆ ಆಹ್ವಾನವಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಗೆ ತೆರಳಲಿದ್ದಾರೆ” ಎಂದರು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಡಿ.ಕೆ.ಶಿವಕುಮಾರ್, “ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷ ಅಥವ ಸರ್ಕಾರದಲ್ಲಿ ಈ ರೀತಿಯ ಯಾವುದೇ ಚರ್ಚೆ ಇಲ್ಲ” ಎಂದು ಹೇಳಿದ್ದರು.
“ನಾನು ಯಾವುದೇ ಹೈಕಮಾಂಡ್ ನಾಯಕರನ್ನು ಈ ಬಾರಿ ಭೇಟಿಯಾಗಿಲ್ಲ. ರಾಹುಲ್ ಗಾಂಧಿ ನಿನ್ನೆ ವಾಪಸ್ ಆಗಿದ್ದಾರೆ. ನಾನು ಅವರಿಗೆ ತೊಂದರೆ ಕೊಡಲು ಹೋಗುವುದಿಲ್ಲ” ಎಂದು ತಿಳಿಸಿದ್ದರು.
ಸಂಪುಟ ಪುನಾರಚನೆ, ವಿಸ್ತರಣೆ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, “ಈ ಕುರಿತು ಮುಖ್ಯಮಂತ್ರಿಗಳನ್ನು ಕೇಳಿ ಈ ಬಗ್ಗೆ ಉತ್ತರ ನೀಡಲು ಅವರೇ ಸೂಕ್ತ ವ್ಯಕ್ತಿ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.
“1980 ರಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಇರುತ್ತೇನೆ. ನಾನು ಅಧಿಕಾರ ಅಥವ ಹುದ್ದೆಯನ್ನು ಕಬಳಿಕೆ ಮಾಡುವುದಿಲ್ಲ. ಕಾರ್ಯಕರ್ತನಾಗಿಯೇ ಇರಲು ಇಚ್ಛಿಸುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್‌ಸ್ಟಾಪ್ ಇಟ್ಟಿದ್ದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.
“ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ” ಎಂದು ತಿಳಿಸಿದ್ದರು.
ಡಿ.ಕೆ.ಶಿವಕುಮಾರ್ ಅವರ ರೀತಿಯೇ, “ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ? ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ ಮೇಲೂ ಪುನಃ ಚರ್ಚೆ ಮಾಡುವ ಅಗತ್ಯವೇ ಇಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಅಹಿಂದ ಸಮಾವೇಶವನ್ನು ಮೈಸೂರಿನಲ್ಲಿ ಮಾಡಲು ತಯಾರಿ ನಡೆಯುತ್ತಿದೆ. ಈ ಸಮಾವೇಶ ಮಾಡದಂತೆ ಹೈಕಮಾಂಡ್ ನಾಯಕರು ತಡೆ ಹಾಕಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

