ನವದೆಹಲಿ: ನೈಋತ್ಯ ದೆಹಲಿಯಲ್ಲಿ ಪಿಜಿ ಕಟ್ಟಡ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರುಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ನೈಋತ್ಯ ದೆಹಲಿಯ ದೆಹಲಿ ವಿವಿ ಸೌತ್ ಕ್ಯಂಪಸ್ ಬಳಿಯ ಸತ್ಯನಿಕೇತನ ಪ್ರದೇಶದಲ್ಲಿರುವ ಬಾಯ್ಸ್ ಪಿಜಿ ಇಂದು ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದಿದೆ. ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಇದಾಗಿದ್ದು, ಕಟ್ಟಡ ಕುಸಿದ ರಭಸಕ್ಕೆ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡ ಕೂಡ ಕುಸಿದು ಬಿದ್ದಿದೆ.
ದುರಂತದಲ್ಲಿ ಈವರೆಗೆ ಆರು ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಲ್ಲಿ ನಾಲ್ವರನ್ನು ಏಮ್ಸ್ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ. ಓರ್ವನ್ನನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕಟ್ಟಡ ಕುಸಿತದಲ್ಲಿ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ. NSUI, AISA ವಿದ್ಯಾರ್ಥಿ ಸಂಘಟನೆ, 12 ಅಗ್ನಿಶಾಮಕ ವಾಹನ ಸಿಬ್ಬಂದಿಗಳು, ಪೊಲೀಸರು, ರಕ್ಷಣಾ ತಂದಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ದೆಹಲಿ ವಿಶ್ವ ವಿದ್ಯಾಲಯ ಬಳಿಯ ಪಿಜಿ ಕಟ್ಟಡ ಇದಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಪಿಜಿಯಲ್ಲಿ ವಾಸವಾಗಿದ್ದರು ಎಂದು ತಿಳಿದುನಂದಿದೆ.
ಸದ್ಯದ ಮಾಹಿತಿ ಪ್ರಕಾರ ಈ ಪಿಜಿ ಕಟ್ಟಡ ಆನಂದ್ ಬನ್ಸಾಲ್ ಎಂಬುವವರಿಗೆ ಸೇರಿದ ಕಟ್ಟಡ ಎಂದು ತಿಳಿದುಬಂದಿದೆ. ಕಟ್ಟಡ ಕುಸಿದ ವೇಳೆ 50 ಯುವಕರು ಈ ಕಟ್ಟಡದಲ್ಲಿ ಇದ್ದರು. 70 ಹಾಸಿಗೆಗಳಿರುವ ಪಿಜಿ ಕಟ್ಟಡ ಇದಾಗಿದೆ.
ದುರಂತದ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಲೆಫ್ಟಿನೆಂಟ್ ಗವರ್ನರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಅವಘಡ: ಸ್ವಾಮೀಜಿಗಳ ಕೈಯಿಂದ ಕೆಳಗೆ ಬಿದ್ದು ಭಗ್ನಗೊಂಡ ಶ್ರೀಕೃಷ್ಣನ ಉತ್ಸವ ಮೂರ್ತಿ
ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವದ ವೇಳೆ ಅವಘಡವೊಂದು ಸಂಭವಿಸಿರುವ ಘಟನೆ ನಡೆದಿದೆ. ರಥೋತ್ಸವದ ವೇಳೆ ಮಣ್ಣಿನ ಕೃಷ್ಣ ಮೂರ್ತಿ ಸ್ವಾಮೀಜಿಗಳ ಕೈಯಿಂದ ಜಾರಿ ಬಿದ್ದು ಭಗ್ನಗೊಂಡಿದೆ.
ಚಾತುರ್ಮಾಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೫ರಂದು ಕೃಷ್ಣ ಮಠದಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ವಿಟ್ಲಪಿಂಡಿ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.ರಥಾರೋಹಣ ಸಂದರ್ಭದಲ್ಲಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರ ಕೈಯಿಂದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಭಗ್ನಗೊಂಡಿದೆ.
ಉತ್ಸವದ ಸಂದರ್ಭದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿರುವುದು ನೆರೆದಿದ್ದ ಅಪಾರ ಸಂಖ್ಯೆಯ ಕೃಷ್ಣ ಭಕ್ತರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ವಿಟ್ಲಪಿಂಡಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಚಾತುರ್ಮಾಸದ ಹಿನ್ನೆಲೆ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ, ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ರಥೋತ್ಸವದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ, ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಕೃಷ್ಣನ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಹೊಡೆತಕ್ಕೆ ಮಣ್ಣಿನಿಂದ ಮಾಡಲಾಗಿದ್ದ ಕೃಷ್ಣನ ಮೂರ್ತಿ ಭಗ್ನವಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದ ವಿಟ್ಲಪಿಂಡಿ ಉತ್ಸವದ ಅಂತಿಮ ಹಂತದಲ್ಲಿ ನಡೆದ ಈ ಘಟನೆ ಆತಂಕಕ್ಕೆ ಕಾರಣವಾಗಿದೆ.

