ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಬಲವಾದ ಧೂಳಿನ ಬಿರುಗಾಳಿ ಬೀಸಿದ್ದು, ಇದರ ಪರಿಣಾಮವಾಗಿ, ಬಿರುಗಾಳಿಗೆ ಗೋಡೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯ ಮಧು ವಿಹಾರ್ ಪೊಲೀಸ್ ಠಾಣೆ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗೋಡೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೂರ್ವ ದೆಹಲಿಯ ಎಡಿಸಿಪಿ 1 ವಿನೀತ್ ಕುಮಾರ್ ತಿಳಿಸಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ಧೂಳಿನ ಬಿರುಗಾಳಿಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಆರು ಅಂತಸ್ತಿನ ಕಟ್ಟಡದ ಗೋಡೆ ಕುಸಿದಿದೆ.
ದೆಹಲಿಯ ತಾಪಮಾನ ಕುಸಿತ
ನಗರದಲ್ಲಿ ಧೂಳಿನ ಬಿರುಗಾಳಿ ಮತ್ತು ಮಧ್ಯಮ ಮಳೆಯ ನಂತರ, ಹವಾಮಾನ ಕೇಂದ್ರಗಳಲ್ಲಿ ತೀವ್ರ ತಾಪಮಾನ ಕುಸಿತ ಕಂಡುಬಂದಿದೆ. ಪಾಲಂನಲ್ಲಿ, ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಯಿತು ಮತ್ತು ಸಫ್ದರ್ಜಂಗ್ ಹವಾಮಾನ ಕೇಂದ್ರದಲ್ಲಿ, ಧೂಳಿನ ಬಿರುಗಾಳಿಯಿಂದಾಗಿ ಪಾದರಸವು 7 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಯಿತು ಎಂದು ಹವಾಮಾನ ಕಚೇರಿ ತಿಳಿಸಿದೆ.
IMD ಆರೆಂಜ್ ಅಲರ್ಟ್
ಭಾರತ ಹವಾಮಾನ ಇಲಾಖೆ(IMD) ಆರೆಂಜ್ ಅಲರ್ಟ್ ನೀಡಿದೆ. ಜನರು ಮನೆಯೊಳಗೆ ಇರಲು, ಕಿಟಕಿಗಳು ಮತ್ತು ಬಾಗಿಲುಗಳನ್ನು ಹಾಕಿ ಸುರಕ್ಷಿತವಾಗಿರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಶಿಫಾರಸು ಮಾಡಿದೆ.
ಸಂಜೆ ಸುರಿದ ಧೂಳಿನ ಬಿರುಗಾಳಿ ಮತ್ತು ಪ್ರತ್ಯೇಕ ಮಳೆಯಿಂದಾಗಿ ಉತ್ತರ ದೆಹಲಿಯ ಕೆಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸ್ಥಳೀಯವಾಗಿ ವ್ಯತ್ಯಯ ಉಂಟಾಗಿದೆ, ಮುಖ್ಯವಾಗಿ ಮರದ ಕೊಂಬೆಗಳು ಮತ್ತು ಇತರ ವಸ್ತುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 15 ವಿಮಾನ ಮಾರ್ಗಗಳ ಬದಲಾವಣೆ ಮಾಡಲಾಗಿದೆ.