ನವದೆಹಲಿ: ಸೋಮವಾರ ಪೂರ್ವ ದೆಹಲಿಯ ಲಕ್ಷ್ಮಿ ನಗರ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬ ಆಗಮಿಸಿ ತನ್ನ ಕುಟುಂಬದ 3 ಸದಸ್ಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವನು ಬರುವ ಮೊದಲು ಯಾವುದೇ ಪಿಸಿಆರ್ ಕರೆ ಬಂದಿಲ್ಲ. ಪೊಲೀಸರ ಪ್ರಕಾರ, ಲಕ್ಷ್ಮಿ ನಗರದ ಸುಭಾಷ್ ಚೌಕ್ ಪ್ರದೇಶದ ನಿವಾಸಿ ಯಶ್ಬೀರ್ ಸಿಂಗ್ ಎಂದು ಗುರುತಿಸಲಾದ ಆರೋಪಿ ಸಂಜೆ 5 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಹೋಗಿ ತನ್ನ ತಾಯಿ, ಸಹೋದರಿ ಮತ್ತು ಕಿರಿಯ ಸಹೋದರನ ಸಾವಿಗೆ ತಾನೇ ಕಾರಣ ಎಂದು ಹೇಳಿಕೊಂಡಿದ್ದಾನೆ.
ಮೃತರನ್ನು ಗೃಹಿಣಿ ಕವಿತಾ (46), ಕರ್ಕಾರ್ಡೂಮಾ ಬಳಿಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಮೇಘನಾ (24) ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಮುಕುಲ್(14) ಎಂದು ಗುರುತಿಸಲಾಗಿದೆ.
ಆರೋಪಿಯ ಹೇಳಿಕೆಯ ಪ್ರಕಾರ, ಕುಟುಂಬವು ತೀವ್ರ ಆರ್ಥಿಕ ಒತ್ತಡದಲ್ಲಿತ್ತು. ಈ ಹಿಂದೆ ಖಾಸಗಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಿಂಗ್ ಕಳೆದ 6 ತಿಂಗಳಿನಿಂದ ನಿರುದ್ಯೋಗಿಯಾಗಿದ್ದ. ಟ್ರಕ್ ಚಾಲಕನಾಗಿದ್ದ ಅವರ ತಂದೆ ಸುಮಾರು ದಿನದಿಂದ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಸಿಂಗ್ ಸುಮಾರು 1.5 ಕೋಟಿ ರೂಪಾಯಿಗಳ ಜೀವ ವಿಮಾ ಪಾಲಿಸಿ ಮಾಡಿಸಿದ್ದ. ಕಳೆದ 2 ತಿಂಗಳಲ್ಲಿ 4-5 ಬಾರಿ ಅಪಘಾತಗಳನ್ನು ಸೃಷ್ಟಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಪ್ರತಿ ಬಾರಿಯೂ ವಿಫಲವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಒಂದು ದಿನ ಮೊದಲು ತನ್ನ ತಾಯಿಯೊಂದಿಗೆ ವಾಗ್ವಾದ ನಡೆದಿತ್ತು. ಭಾನುವಾರ ತಾಯಿ ತನ್ನ ಜೀವನವನ್ನು ಕೊನೆಗೊಳಿಸಲು ಬಯಸಿದರೆ ಮೊದಲು ಕುಟುಂಬದ ಎಲ್ಲ ಸದಸ್ಯರನ್ನು ಕೊಲ್ಲಬೇಕೆಂದು ಮಗನಿಗೆ ಹೇಳಿದ್ದಾಳೆ. ಆರೋಪಿಯು ಭಾನುವಾರ ಬೆಳಿಗ್ಗೆ ಯಮುನಾ ಬ್ಯಾಂಕ್ ಪ್ರದೇಶದಿಂದ ಧಾತುರಾ ಬೀಜಗಳನ್ನು ತಂದು, ಅವುಗಳನ್ನು ಆಹಾರದೊಂದಿಗೆ ಬೆರೆಸಿ, ತನ್ನ ಕುಟುಂಬ ಸದಸ್ಯರಿಗೆ ತಿನ್ನಿಸಿದ್ದಾನೆ ಎಂದು ಹೇಳಿದ್ದಾನೆ.
ಅವನ ಹೇಳಿಕೆಯ ಪ್ರಕಾರ, ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದ ಬಳಿಯ ಶಿವ ಮಂದಿರಕ್ಕೆ ಹೋಗಿ, ಹತ್ತಿರದ ಧಾತುರಾ ಸಸ್ಯದಿಂದ ಧಾತುರಾ ಬೀಜಗಳನ್ನು ಸಂಗ್ರಹಿಸಿ ತಂದಿದ್ದಾನೆ. ಹಿಟ್ಟು ಮತ್ತು ಸಕ್ಕರೆಯನ್ನು ಬಳಸಿ ಲಡ್ಡೂಗಳನ್ನು ತಯಾರಿಸಿ, ತನ್ನ ಕುಟುಂಬ ಸದಸ್ಯರಿಗೆ ತಿನ್ನಿಸಿದ್ದಾನೆ. ಅವರು ಪ್ರಜ್ಞೆ ಕಳೆದುಕೊಂಡ ನಂತರ, ಅವರನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿವರಗಳು ಆರೋಪಿಯ ಹೇಳಿಕೆಗಳಾಗಿದ್ದು, ಇನ್ನೂ ಸ್ವತಂತ್ರವಾಗಿ ತನಿಖೆ ನಡೆಸಿ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಘಟನೆಗಳ ನಿಖರವಾದ ಅನುಕ್ರಮ ಮತ್ತು ಸಾವಿಗೆ ಕಾರಣವನ್ನು ತಿಳಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಎಫ್‌ಐಆರ್ ದಾಖಲಿಸಲಾಗುತ್ತಿದೆ ಮತ್ತು ವಿವರವಾದ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ.

