ನವದೆಹಲಿ-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಪರಾಧ ಕೃತ್ಯಗಳು ಮಿತಿಮೀರಿದ್ದು, ಕೇವಲ 48 ಗಂಟೆಗಳ ಅಂತರದಲ್ಲಿ ನಡೆದ ಮೂರು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ಇಡೀ ನಗರವನ್ನು ಬೆಚ್ಚಿಬೀಳಿಸಿವೆ. ಸರಣಿ ಕೊಲೆಗಳು ದೆಹಲಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ಪೊಲೀಸರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮೂರು ಭೀಕರ ಘಟನೆಗಳ ವಿವರ
ದೆಹಲಿಯ ಕೇಶವಪುರಂ ಪ್ರದೇಶದಲ್ಲಿ ಗುರುವಾರ ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ತಂಡಗಳು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಮೃತರ ಗುರುತು ಹಾಗೂ ದಾಳಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಮಂಗಳವಾರ ಮಧ್ಯಾಹ್ನ ಅಶೋಕ್ ವಿಹಾರ್ ಪ್ರದೇಶದ ಖಿಮ್ಮನ್ ಸಿಂಗ್ ಪಾರ್ಕ್ನಲ್ಲಿ 30 ವರ್ಷದ ಸುನಿಲ್ ಎಂಬುವವರನ್ನು ಅಪರಿಚಿತರ ಗುಂಪು ಇರಿದು ಕೊಂದಿದೆ. ಉತ್ತರ ಪ್ರದೇಶದ ಮೈನ್ಪುರಿ ನಿವಾಸಿಯಾಗಿದ್ದ ಸುನಿಲ್, ಜಹಾಂಗೀರ್ಪುರಿಯ ದೇವಕಿ ಎಂಬವರೊಂದಿಗೆ ಉದ್ಯಾನದಲ್ಲಿದ್ದಾಗ ಅಲ್ಲಿಗೆ ಬಂದ 3-4 ಜನ ದುಷ್ಕರ್ಮಿಗಳು ವಾಗ್ವಾದ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ದೇವಕಿ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ.
ದಕ್ಷಿಣ ದೆಹಲಿಯ ಖರಕ್ ಗಾಂವ್ ಗ್ರಾಮದಲ್ಲಿ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ 60 ವರ್ಷದ ತಾಯಿ ಚಿಂತಾ ದೇವಿ ಅವರನ್ನು ಸ್ವಂತ ಕಿರಿಯ ಮಗನೇ ಮನೆಯಲ್ಲಿ ಥಳಿಸಿ ಕೊಂದಿದ್ದಾನೆ. ಗಂಭೀರ ಗಾಯಗೊಂಡು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲIದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ಅಮೋದ್ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮ
ಸರಣಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಂಡಗಳು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕಿವೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂತಹ ರಕ್ತಸಿಕ್ತ ಘಟನೆಗಳು ನಾಗರಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ.

