ಕೊಪ್ಪಳ : ಡಿ.ಇಎಲ್.ಇಡಿ ಪರೀಕ್ಷೆಗಳು ಏಪ್ರಿಲ್ 27 ರಿಂದ ಮೇ 4 ರವರೆಗೆ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಡಿ.ಇಎಲ್.ಇಡಿ ಪರೀಕ್ಷೆಗಳು ಏಪ್ರಿಲ್ 27 ರಿಂದ ಮೇ 4ರ ವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುನಿರಾಬಾದ್ ಗ್ರಾಮದಲ್ಲಿರುವ ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪಿ.ಎಸ್.ಟಿ.ಇ ವಿಭಾಗದಲ್ಲಿ ಜರುಗಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ತಡೆಗಟ್ಟಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಅಂತರದ ಪ್ರದೇಶದಲ್ಲಿ ವಿವಿಧ ಷರತ್ತಿಗೆ ಒಳಪಟ್ಟು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷೆಯಲ್ಲಿ ಪ್ರವೇಶ ಪತ್ರ ಹೊಂದಿದ ಅಭ್ಯರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನೂಳಿದವರಿಗೆ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಫ್ಯಾಶನ್ ಡಿಸೈನಿಂಗ್, ಟೈಲರಿಂಗ್: ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕೊಪ್ಪಳ : ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕೊಪ್ಪಳ ವತಿಯಿಂದ ಯುವ ನಿಧಿ ಮತ್ತು ಮಹಿಳಾ ಫಲಾನಭವಿಗಳಿಗೆ ಉಚಿತವಾಗಿ ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಕುರಿತು 24 ದಿನಗಳ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಪ್ರಾರಂಭಿಸುವ ಆಸಕ್ತರುಗಳಿಗಾಗಿ ಕೊಪ್ಪಳದಲ್ಲಿ ಫ್ಯಾಶನ್ ಡಿಸೈನಿಂಗ್ & ಟೈಲರಿಂಗ್ ಬಗ್ಗೆ 24 ದಿನಗಳ ಕೌಶಲ್ಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯ ಯಾವುದೆ ತಾಲೂಕಿನ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್), ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗುವದು.
ಈ ಕಾರ್ಯಕ್ರಮದಲ್ಲಿ ಆಯಾ ವೃತ್ತಿಗಳಲ್ಲಿ ಕೌಶಲ್ಯದ ಪ್ರಾಯೋಗಿಕ ಹಾಗೂ ಸಿದ್ಧಾಂತದೊAದಿಗೆ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಮತ್ತು ಸಂಬಂಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ, ಮಾಹಿತಿ ನೀಡಲಾಗುವದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವದು. ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಅರ್ಹರಿಗೆ ಸರ್ಕಾರಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡಲಾಗುವದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 35 ವರ್ಷದೊಳಗಿನ, ಕನಿಷ್ಠ SSಐಅ ಪಾಸ್ ಆದ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು. ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಹೊಸಪೇಟೆ ರಸ್ತೆ, ನಗರ ಸಭೆ ಎದುರು, ಕೊಪ್ಪಳ-583231 ಇಲ್ಲಿಗೆ ಏಪ್ರಿಲ್ 28 ರೊಳಗಾಗಿ ಭೇಟಿ ನೀಡುವದು ಅಥವಾ ಮೋಬೈಲ್ ಸಂಖ್ಯೆ 7204016012 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

