ನವದೆಹಲಿ: ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ರಾಷ್ಟ್ರರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎನ್ ಐಎ ಅಧಿಕಾರಿಗಳು ಮತ್ತಷ್ಟು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಮುಜಮ್ಮಿಲ್ ಸೇರಿದಂತೆ ನಾಲ್ವರು ಶಂಕಿತರನ್ನು ಇಂದು ದೆಹಲಿಯ ಪಟಿಯಾಲಾ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು ಎನ್ ಐಎ ಕಸ್ಟಡಿಗೆ ವಹಿಸಿದೆ.
ಡಾ.ಮುಜಮ್ಮಿಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ನ್ಯಾಯಾಲಯ 10 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ನವೆಂಬರ್ 10ರಂದು ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟಗೊಂಡಿತ್ತು. ಕೃತ್ಯದ ಹಿಂದೆ ಉಗ್ರರ ಕೈವಾಡವಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದರು, ಹಲವರು ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ಎನ್ ಐಎ ಗೆ ಹಸ್ತಾಂತರಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
