ಬಾಲಿವುಡ್ನ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಶೀಘ್ರದಲ್ಲೇ ಎರಡನೇ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈ ಶುಭ ಸುದ್ದಿಯ ನಡುವೆ, ಶನಿವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ದೀಪಿಕಾ ಪಡುಕೋಣೆ, ತಮ್ಮ ಹೆತ್ತವರ ಮನೆ ಇರುವ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.
ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿರುವ ದೀಪಿಕಾ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಬಳಿ ಕ್ಯಾಮೆರಾ ಕಣ್ಣಿಗೆ ಬಿದ್ದ ಅವರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ತಿಳಿ ನೀಲಿ ಬಣ್ಣದ ಓವರ್ಸೈಜ್ ಶರ್ಟ್, ಬ್ಲೂ ಜೀನ್ಸ್ ಹಾಗೂ ವೈಟ್ స్ನೀಕರ್ಸ್ ಧರಿಸಿದ್ದ ದೀಪಿಕಾ ಸರಳ ಲುಕ್ನಲ್ಲಿ ಮಿಂಚಿದರು.
ಪತ್ನಿ ದೀಪಿಕಾರನ್ನು ಬೀಳ್ಕೊಡಲು ಆಗಮಿಸಿದ್ದ ನಟ ರಣ್ವೀರ್ ಸಿಂಗ್, ಕಾರಿನಿಂದ ಕೆಳಗಿಳಿಯದೆ ಒಳಗಡೆಯೇ ಕುಳಿತು ದೀಪಿಕಾಗೆ ಶುಭಕೋರಿದರು. ವಿಮಾನ ನಿಲ್ದಾಣದ ಆವರಣದಲ್ಲಿದ್ದ ಛಾಯಾಗ್ರಾಹಕರು ಫೋಟೋಗೆ ಮನವಿ ಮಾಡಿದರೂ, ದೀಪಿಕಾ ಯಾವುದೇ ಪೋಸ್ ನೀಡದೆ ನೇರವಾಗಿ ಟರ್ಮಿನಲ್ ಕಡೆಗೆ ಹೆಜ್ಜೆ ಹಾಕಿದರು.
2018ರಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿ, 2024ರ ಸೆಪ್ಟೆಂಬರ್ನಲ್ಲಿ ತಮ್ಮ ಮೊದಲ ಮಗಳು ‘ದುವಾ’ಳನ್ನು ಜಗತ್ತಿಗೆ ಪರಿಚಯಿಸಿದ್ದರು. ಇದೀಗ ಎರಡನೇ ಮಗುವಿನ ಆಗಮನಕ್ಕಾಗಿ ದೀಪಿಕಾ ತವರು ಮನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ವೃತ್ತಿಜೀವನದ ವಿಷಯಕ್ಕೆ ಬಂದರೆ, ದೀಪಿಕಾ ಶೀಘ್ರದಲ್ಲೇ ಶಾರೂಖ್ ಖಾನ್ ಜೊತೆ ‘ಕಿಂಗ್’ ಹಾಗೂ ಅಲ್ಲು ಅರ್ಜುನ್ ಜೊತೆ ಅಟ್ಲೀ ನಿರ್ದೇಶನದ ‘ರಾಕಾ’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

