ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಕಾರ ನೀಡಿದ ಇಬ್ಬರು ಸ್ಥಳೀಯರನ್ನು ಬಂಧಿಸಲಾಗಿದೆ.
ಚಿರಾಗ್ ಪೂಜಾರಿ(26), ಮಹಮ್ಮದ್ ಇರ್ಶಾದ್(43) ಎನ್ನುವವರನ್ನು ಬಂಧಿಸಲಾಗಿದೆ. ಇವರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಎರ್ಮಾಲು ಗ್ರಾಮದ ನಿವಾಸಿಗಳಾಗಿದ್ದಾರೆ. ಆಗಸ್ಟ್ 7 ರಂದು ಮುದರಂಗಡಿಪೇಟೆಯಲ್ಲಿ ಶೂಟೌಟ್ ನಡೆದಿತ್ತು. ಕಾಂಗ್ರೆಸ್ ಮುಖಂಡ ಮತ್ತು ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಉತ್ತರಪ್ರದೇಶ ಮೂಲದ ರಾಜು, ಉತ್ತರಾಖಂಡ ಮೂಲದ ಅಜಯ್ ರಸ್ತೋಗಿ ಮತ್ತು ಬಿಹಾರದ ಜಿಯಾವುಲ್ಲಾ ವಜೂಲ್ ಶೇಖ್ ಅವರಿಗೆ ಸ್ಥಳೀಯರು ಸಹಕಾರ ನೀಡಿದ್ದರು. ಹತ್ಯೆ ಮಾಡಿದ್ದ ಮೂವರು ಆರೋಪಿಗಳಿಗೆ ಹಣ ವರ್ಗಾವಣೆಗೆ ಸಹಕಾರ ನೀಡಿದ್ದರು. ಸುಪಾರಿ ಹಣ ವರ್ಗಾಯಿಸಲು ಸಹಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಸ್ಥಳೀಯರನ್ನು ಬಂಧಿಸಲಾಗಿದೆ. ಇದರೊಂದಿಗೆ ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

