ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ವಿರುದ್ಧ ಸಾದಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.
ಏಪ್ರಿಲ್ 9ರಂದು ನಡೆಯುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಗುರುವಾರ ಮಧ್ಯಾಹ್ನ 3 ಗಂಟೆ ತನಕ ಅವಕಾಶವಿತ್ತು. ಆದರೆ ಸಾದಿಕ್ ಪೈಲ್ವಾನ್ ಕಣದಲ್ಲಿ ಉಳಿದಿದ್ದು, ನಾಮಪತ್ರ ವಾಪಸ್ ಪಡೆದಿಲ್ಲ.
ಸಾದಿಕ್ ಪೈಲ್ವಾನ್ ಮನವೊಲಿಕೆ ಮಾಡಲು ಕಾಂಗ್ರೆಸ್ ನಾಯಕರು ಗುರುವಾರ ನಡೆಸಿದ ಸಂಧಾನ ಫಲ ಕೊಟ್ಟಿಲ್ಲ. ಬೆಂಗಳೂರಿನಿಂದ ಮುಸ್ಲಿಂ ಸಮುದಾಯದ ಶಾಸಕರು, ಎಂಎಲ್ಸಿಗಳು ಬಂದು ಸಾದಿಕ್ ಪೈಲ್ವಾನ್ ಜೊತೆ ಮಾತುಕತೆ ನಡೆಸಿದ್ದರು. ಆದರೆ ನಾಮಪತ್ರ ವಾಪಸ್ ತೆಗೆದುಕೊಳ್ಳದೇ ಅವರು ಕಣದಲ್ಲಿ ಉಳಿದಿದ್ದಾರೆ.
22 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ: ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನ. ಸಮರ್ಥ್ ಶಾಮನೂರು ಸೇರಿ 23 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ 22 ಅಭ್ಯರ್ಥಿಗಳು ಮುಸ್ಲಿಂ ಸಮುದಾಯದವರು.
ಸಾದಿಕ್ ಪೈಲ್ವಾನ್ ಪಕ್ಷೇತರ, ಎಸ್ಡಿಪಿಐ ಪಕ್ಷದ ಅಫ್ಸರ್ ಕೂಡ್ಲಿಪೇಟೆ ಪ್ರಮುಖ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಸುಮಾರು 80 ಸಾವಿರ ಮುಸ್ಲಿಂ ಮತಗಳಿವೆ. ಇವು ಈಗ ಹರಿದು ಹಂಚಿ ಹೋಗುವ ಆತಂಕದಲ್ಲಿ ಕಾಂಗ್ರೆಸ್ ಇದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಸಾದಿಕ್ ಪೈಲ್ವಾನ್ ಕಳೆದ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಭಾನುವಾರ ಕಾಂಗ್ರೆಸ್ ಸಾದಿಕ್ ಪೈಲ್ವಾನ್ ಬದಲು ಸಮರ್ಥ್ ಶಾಮನೂರು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.
ಸೋಮವಾರ ಸಾದಿಕ್ ಪೈಲ್ವಾನ್ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಪಕ್ಷದ ನಾಯಕರಿಗೆ ಸೆಡ್ಡು ಹೊಡೆದಿದ್ದರು. ಆದರೆ ಅವರು ನಾಮಪತ್ರ ವಾಪಸ್ ಪಡೆಯುವ ನಿರೀಕ್ಷೆ ಇತ್ತು. ಆದರೆ ಅವರ ಮನವೊಲಿಕೆ ಮಾಡಲು ನಾಯಕರು ವಿಫಲರಾಗಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೈ ತಪ್ಪಿದ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಕೇರಳ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ದಾವಣಗೆರೆ ದಕ್ಷಿಣದತ್ತ ಗಮನ ಕೊಟ್ಟಿಲ್ಲ. ಸಾದಿಕ್ ಪೈಲ್ವಾನ್ ಯಾರ ಮಾತನ್ನ ಕೇಳದೇ ಕಣದಲ್ಲಿ ಉಳಿದಿದ್ದು, ಕಾಂಗ್ರೆಸ್ಗೆ ತಲೆನೋವು ತಂದಿದೆ.

