ದಾವಣಗೆರೆ: ದಾವಣಗೆರೆಯಲ್ಲಿ ನಡೆದಿದ್ದ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಘಟಾನುಘಟಿ ಸಚಿವರ ಆಪ್ತರೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಮತ್ತೋರ್ವ ಸಚಿವರ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಅವರ ಪರಮಾಪ್ತ ಅನ್ವರ್ ಬಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಈವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಪೊಲೀಸರು ದಾವಣಗೆರೆಯ ಪ್ರಭಾವಿ ನಾಯಕರ ನಶೆ ಇಳಿಸಿದ್ದಾರೆ.
ಡಿಸೆಂಬರ್ 23ರಂದು ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಕಾಂಗ್ರೆಸ್ ಮುಖಂಡ ವೇದಮೂರ್ತಿ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಬಂಧಿತ ವೇದಮೂರ್ತಿ ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರ ಆಪ್ತ ಎಂದು ತಿಳಿದುಬಂದಿದೆ. ಬಂಧಿತರಿಂದ 90 ಗ್ರಾಂ ಎಂಡಿಎಂ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.
ಇದೀಗ ಇದೇ ಪ್ರಕರಣದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಅನ್ವರ್ ಬಾಷಾ ಹಾಗೂ ಪಾರಸ್, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ದಾವಣಗೆರೆ ಕಾಂಗ್ರೆಸ್ ಮುಖಂಡರೆ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಡ್ರಗ್ಸ್ ದಂಧೆಯ ಕಿಂಗ್ ಪಿನ್ ಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಎಸ್ ಪಿ ಲೇಡಿ ಸಿಗಂ ಉಮಾ ಪ್ರಶಾಂತ್ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

