ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಸೆಪ್ಟೆಂಬರ್ 22ರಿಂದ ನವರಾತ್ರಿ, ದಸರಾ ಮಹೋತ್ಸವ ಆರಂಭವಾಗಲಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದೆ.
ರಾಜ್ಯದೆಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರು, ಪ್ರಯಾಣಿಕರ ಅನುಕೂಲಕ್ಕಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆ, ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ನಿಲ್ದಾಣ ಹಾಗೂ ಅಂತರಾಜ್ಯದ ಹಲವು ಭಾಗಗಳಿಂದಲೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸೆಪ್ಟೆಂಬರ್ 26, 27 ಮತ್ತು 30ರಂದು ಈ ಭಾಗಗಳಿಂದ ಬಸ್ ಗಳು ಮೈಸೂರಿಗೆ ತೆರಳಲಿವೆ.
ಅಕ್ಟೋಬರ್ 2 ಹಾಗೂ 5ರಂದು ಈ ಬಸ್ ಗಳು ಬೆಂಗಳೂರಿಗೆ ಮರಳಲಿವೆ ಎಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಕಾರವಾರ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಹೊಸಪೇಟೆ, ಕಬುರಗಿ, ರಾಯಚೂರು ಈಎಲ್ಲಾ ಸ್ಥಳಗಳಿಗೂ ವಿಶೇಷ ಬಸ್ ಸಂಚರಿಸಲಿವೆ.
ಕರ್ನಾಟಕದಿಂದ ಹೊರ ರಾಜ್ಯಗಳಿಗೂ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚನಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲಕ್ಕಾಡ್ ತಾಣಗಳಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಇನ್ನು ವಿವಿಧ ಭಾಗಗಳಿಂದ ದಸರಾಗೆ ಬರುವವರುಗಾಗಿ ಬೆಂಗಳೂರು-ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್ ಸೌಲಭ್ಯ ಕೂಡ ಇರಲಿದೆ. ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಾಳದ ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಚಾಮರಾಜನಗರ ತಾಣಗಳಿಗೆ 350 ಬಸ್ ಸೇವೆ ಕಲ್ಪಿಸಲಾಗಿದೆ.