ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಹುಬ್ಬಳ್ಳಿಯಲ್ಲಿ ನಡೆದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಸುದೀಪ್ ಯುದ್ಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮ್ಮ ಅಭಿಮಾನಿಗಳು ನೀವು ಸುಮ್ಮನೆ ಇರಬೇಡಿ. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಯಾಕೆ ಮಾಡುತ್ತಿದ್ದೇವೆ ಎಂದರೆ ಇಲ್ಲಿಂದ ಮಾತನಾಡಿದರೆ ಕೆಲವೊಬ್ಬರಿಗೆ ತಟ್ಟುತ್ತದೆ. ಅದಕ್ಕೆ ಇಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಾತನಾಡಿದ ಸುದೀಪ್, ಯುದ್ಧಕ್ಕೆ ಸಿದ್ಧವಾಗಿದ್ದೇವೆ ಅಂತ ಗುಡುಗಿದ್ದಾರೆ. ಐದು ತಿಂಗಳ ಹಿಂದೆ ‘ಮಾರ್ಕ್’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಅಂತೆಯೇ ನಾವು ಡಿ. 25ರಂದು ಬರುತ್ತಿದ್ದೇವೆ. ಈ ನಡುವೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ರೆಡಿಯಾಗಿದ್ದೇವೆ. ಡಿಸೆಂಬರ್ 25ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಆದರೆ ಹೊರಗಡೆ ಯುದ್ಧಕ್ಕೆ ಒಂದು ಪಡೆ ರೆಡಿಯಾಗುತ್ತಿದ್ದಾರೆ. ನಾವೂ ಸಿದ್ಧರಿದ್ದೇವೆ ಎಂದು ಸುದೀಪ್ ಹೇಳಿದ್ದಾರೆ.
ಸುದೀಪ್ ಈ ಮಾತುಗಳನ್ನಾಡಿದ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಪೈರಸಿ ಬಗ್ಗೆ ಹೇಳಿದ್ರಾ ಅಥವಾ ‘ಮಾರ್ಕ್’ ರಿಲೀಸ್ ವೇಳೆ ಬಿಡುಗಡೆಯಾಗಲಿರುವ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಶೆಟ್ಟಿ ಅವರ ‘45’ ಚಿತ್ರದ ಬಗ್ಗೆ ಹೇಳಿದ್ರಾ? ಇಲ್ಲವೇ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳಿದ್ರಾ ಎಂದೆಲ್ಲಾ ಚರ್ಚೆಯಾಗ್ತಿದೆ.
ಈ ನಡುವೆ ಇಂದು ದಾವಣಗೆರೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪರೋಕ್ಷ ಟಾಂಗ್ ನೀಡಿದ್ದಾರೆ. ‘ಡೆವಿಲ್’ ಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಮಾತನಾಡಿ, ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಅಭಿಮಾನಿಗಳ ಬಗ್ಗೆ ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಟಿವಿ ಸಂದರ್ಶನದಲ್ಲಿ, ಸ್ಟೇಜ್ ಮೇಲೆ ಮಾತಾಡ್ತಾರೆ. ಆದರೆ, ದರ್ಶನ್ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರುತ್ತಾರೆ. ಟೀಕಿಸುವವರ ಬಗ್ಗೆ ದರ್ಶನ್ ತಲೆಕೆಡಿಸಿಕೊಳ್ಳುವುದಿಲ್ಲ. ಬೇಜಾರು ಮಾಡಿಕೊಳ್ಳುವುದಿಲ್ಲ. ದರ್ಶನ್ ಅಭಿಮಾನಿಗಳಾದ ನೀವು ಕೂಡ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

