ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನದಿ ತೀರಕ್ಕೆ, ಜಲಪಾತಗಳ ವೀಕ್ಷಣೆಗೆ, ಸಮುದ್ರದ ಬಳಿ ಹೋಗದಂತೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ ಕೆಲ ಪ್ರವಾಸಿಗರು ಎರಗುಂಡಿ ಫಾಲ್ಸ್ ನೋಡಲು ಹೋಗಿ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ.
ಸ್ಥಳೀಯರ ಮಾತು ನಿರ್ಲಕ್ಷ್ಯ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಬಳಿಯ ಎರಗುಂಡಿ ಜಲಪಾತ ವೀಕ್ಷಿಸಲೆಂದು ಐವರು ಪ್ರವಾಸಿಗರು ತೆರಳಿದ್ದರು. ಈ ವೇಳೆ ವರುಣಾರ್ಭಟಕ್ಕೆ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿ ಧುಮ್ಮಿಕ್ಕಿ ಹರಿಯಲಾರಂಭಿಸಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಪ್ರವಾಸಿಗರು ಬಂಡೆಗಳ ಮೇಲೆ ನಿಂತು ರಕ್ಷಣೆಗಾಗಿ ಕೋಗಿಕೊಂಡಿದ್ದಾರೆ.
ಅಪಾಯಕ್ಕೆ ಸಿಲುಕಿದ್ದ ಐವರು ಪ್ರವಾಸಿಗರನ್ನು ಸ್ಥಳೀಯರು ರೋಪ್ ಹಾಕಿ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಪ್ರವಾಸಿಗರ ಜೀವ ಉಳಿದಿದೆ.