ಪ್ರಕೃತಿ ನೀಡಿದ ಅತ್ಯಂತ ಪೌಷ್ಟಿಕಾಂಶಯುಕ್ತ ಹಣ್ಣುಗಳಲ್ಲಿ ದಾಳಿಂಬೆ ಪ್ರಮುಖವಾದದ್ದು. ಕೆಂಪು ಮುತ್ತುಗಳಂತಿರುವ ಈ ಹಣ್ಣು ಸುವಾಸನೆ ಮತ್ತು ರುಚಿಗೆ ಮಾತ್ರವಲ್ಲದೆ, ಔಷಧೀಯ ಗುಣಗಳಿಗೂ ಹೆಸರಾಗಿದೆ. ಪ್ರತಿದಿನ ದಾಳಿಂಬೆ ಸೇವಿಸುವುದರಿಂದ ದೇಹದ ವಿವಿಧ ಅಂಗಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ಹಲವು ರೀತಿಯ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಳ ದಾಳಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಕಾಲೋಚಿತವಾಗಿ ಬರುವ ಶೀತ, ಕೆಮ್ಮು ಮತ್ತು ಇತರ ಸೋಂಕುಗಳಿಂದ ದೇಹವನ್ನು ಕಾಯುತ್ತವೆ.
ಹೃದಯದ ಆರೋಗ್ಯಕ್ಕೆ ಉತ್ತಮ ದಾಳಿಂಬೆ ಹಣ್ಣು ರಕ್ತದೊತ್ತಡವನ್ನು (ಬಿಪಿ) ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗುವುದನ್ನು ತಡೆಯುತ್ತವೆ. ಇದರಿಂದ ರಕ್ತ ಸಂಚಾರ ಸರಾಗವಾಗಿ ನಡೆದು, ಹೃದಯಾಘಾತದಂತಹ ಅಪಾಯ ಕಡಿಮೆಯಾಗುತ್ತದೆ.
ರಕ್ತಹೀನತೆ ನಿವಾರಣೆ ದಾಳಿಂಬೆಯಲ್ಲಿ ಕಬ್ಬಿಣದ ಅಂಶ (ಐರನ್) ಹೇರಳವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಮತ್ತು ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುವವರು ನಿತ್ಯ ಈ ಹಣ್ಣು ಅಥವಾ ಇದರ ರಸವನ್ನು ಸೇವಿಸುವುದರಿಂದ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚುತ್ತದೆ.
ಜೀರ್ಣಕ್ರಿಯೆಗೆ ಪೂರಕ ಈ ಹಣ್ಣಿನಲ್ಲಿ ನಾರಿನಂಶ (ಫೈಬರ್) ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರವಾಗಿದೆ. ಅಲ್ಲದೆ, ಹೊಟ್ಟೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಶಮಗೊಳಿಸುತ್ತದೆ.
ಚರ್ಮ ಮತ್ತು ಕೂದಲಿನ ಸೌಂದರ್ಯ ದಾಳಿಂಬೆಯಲ್ಲಿರುವ ಉರಿಯೂತ ನಿರೋಧಕ ಗುಣಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ವಯಸ್ಸಾದಂತೆ ಮುಖದ ಮೇಲಾಗುವ ಸುಕ್ಕುಗಳನ್ನು ತಡೆದು, ಚರ್ಮವನ್ನು ಯಂಗ್ ಆಗಿಡಲು ಇದು ನೆರವಾಗುತ್ತದೆ. ಅಂತೆಯೇ ಕೂದಲಿನ ಬೇರುಗಳನ್ನು ಗಟ್ಟಿಮಾಡಲು ಕೂಡ ಸಹಾಯ ಮಾಡುತ್ತದೆ.

