ರಾಮನಗರ: ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಇಷ್ಟು ಅನ್ಯಾಯ ಮಾಡ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ರಾಜ್ಯ ಬಿಜೆಪಿ ನಾಯಕರು ಇದಕ್ಕೆ ಏನು ಉತ್ತರ ಕೊಡ್ತಾರೆ? ಎಂದು ಪ್ರಶಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ. ಮನರೇಗಾ ಯೋಜನೆ ಮರು ಜಾರಿ ಮಾಡಲಿ ಎಂಬುದು ನಮ್ಮ ಆಗ್ರಹ ಎಂದರು.
ಚುನಾವಣೆ ನಡೆಯುವ ರಾಜ್ಯಗಳಿಗೆ ಅನುಕೂಲವಾಗುವ ಬಜೆಟ್ ಇದು. ಕೇಂದ್ರದ ಬಜೆಟ್ ಚುನಾವಣಾ ಬಜೆಟ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಮ್ಮ ರಾಜ್ಯಕ್ಕೆ ನಷ್ಟವಾಗುತ್ತಿದೆ. ಕರ್ನಾಟಕಕ್ಕೆ ಇಷ್ಟೊಂದು ದೊಡ್ಡ ಅನ್ಯಾಯ ಮಾಡ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೇಂದ್ರದಲ್ಲಿರುವ ರಾಜ್ಯದ ಸಚಿವರು ಸಂಸದರು ರಾಜೀನಾಮೆ ಕೊಡುವುದು ಸೂಕ್ತ. ಅವರಿಗೆ ಸ್ವಾಭಿಮಾನ ಇದ್ದರೆ, ರಾಜ್ಯದ ಬಗ್ಗೆ ಆಸಕ್ತಿಯಿದ್ದರೆ ಎಲ್ಲರೂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಧ್ವನಿ ಇಲ್ಲದ ಬಿಜೆಪಿ ಸಂಸದರು, ಕೇಂದ್ರ ಸಚಿವರು ದೊಡ್ಡ ದೊಡ್ಡ ಮಾತನಾಡುತ್ತಾರೆ. ರಾಜ್ಯಕ್ಕೆ 10 ರೂಪಾಯಿ ಅನುದಾನ ತಂದಿದ್ದೇವೆ ಎಂದು ಹೇಳುವ ನೈತಿಕತೆಯೂ ಅವರಿಗಿಲ್ಲ. ಅವರು ನೈತಿಕ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

