HomeKarnatakaBIG NEWS: ರಾಜ್ಯದ ಸಂಸದರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ: ಚರ್ಚೆಯಾದ ಪ್ರಮುಖ ಅಂಶಗಳು

BIG NEWS: ರಾಜ್ಯದ ಸಂಸದರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ: ಚರ್ಚೆಯಾದ ಪ್ರಮುಖ ಅಂಶಗಳು

ನವದೆಹಲಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನವದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಸಭೆ ನಡೆಸಿದರು. ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದವು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಇಲ್ಲಿವೆ.

ಸಭೆಯಲ್ಲಿ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ. 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ, ಬೆಂಗಳೂರಿನ STRR ಯೋಜನೆ, ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಸೇರಿದಂತೆ ಇತರೆ ರಾಜ್ಯದ ಬಾಕಿ ಇರುವ ಯೋಜನೆಗಳ ಬಗ್ಗೆ ಚರ್ಚಿಸಿದ್ದು, ಇವುಗಳ ಜಾರಿಗೆಗೆ ಒಗ್ಗಟ್ಟಾಗಿ ಸಂಬಂಧಪಟ್ಟ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲು ಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಭೆಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ವಿಚಾರ ಬಂದಾಗ, ರಾಜ್ಯದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡೋಣ. ರಾಜ್ಯದ ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ. ರಾಜ್ಯದ ಪ್ರಗತಿಗೆ ನಿಮ್ಮ ಸಹಕಾರ ಬಯಸುತ್ತೇನೆ. ಕೇಂದ್ರ ಸರಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ನಿಮ್ಮ ಸಹಕಾರ ಬಹು ಮುಖ್ಯ ಎಂದರು.

ನಾನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಕರ್ನಾಟಕದಲ್ಲಿ ಆಲಮಟ್ಟಿ, ಹಾರಂಗಿ ಜಲಾಶಯ ಬಿಟ್ಟು ಉಳಿದ ಅಣೆಕಟ್ಟೆಗಳು ಬಹುತೇಕ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ, ಜಾನುವಾರಿಗೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಲಕ್ಷಣಗಳು ಇವೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ಅಗತ್ಯ ನೆರವು ಕೋರಿದ್ದೇನೆ. ಅದು ಸಿಗಲು ನಿಮ್ಮ ಸಹಕಾರ ಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ನೋಡಿ ಬೆಳೆ ಹಾಕಿ ಅಂತ ರೈತರಿಗೆ ಮನವಿ ಮಾಡಿದ್ದೇನೆ. ಹೇಳಿದ್ದೇನೆ. ಜತೆಗೆ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ.

ತುಂಗಭದ್ರಾ ಕ್ರೆಸ್ಟ್ ಗೇಟ್ ಅಳವಡಿಕೆ ನೆಪದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ ಎಸ್ ಪಾಟೀಲ್ ಅವರ ಸಮ್ಮುಖದಲ್ಲಿ ನಾನು, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ – ಮೂವರು ಸಿಎಂಗಳು ಒಂದೆಡೆ ಸೇರಿದ್ದೆವು. ನಮ್ಮ ಮನವಿಗೆ ಓಗೊಟ್ಟು ಕೇಂದ್ರ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ರು. 30 ಟಿಎಂಸಿ ನೀರು ಉಳಿಸಲು ತುಂಗಭದ್ರಾಕ್ಕೆ ನವಿಲೆ ಸಮತೋಲನ ಜಲಾಶಯ ಕಟ್ಟಲು ಕೇಂದ್ರ ಸಚಿವರ ಸಮ್ಮುಖದಲ್ಲಿ ಮೂವರು ಸಿಎಂಗಳು ಒಪ್ಪಿದ್ದೇವೆ.

ಜತೆಗೆ ಗೋದಾವರಿ, ಕೃಷ್ಣ, ಪೆನ್ನಾರ್, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಒಪ್ಪಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ ಎಂದರು.

ತಮಿಳುನಾಡು ಸಿಎಂ ವಿಜಯ್ ಅವರು ನನ್ನನ್ನು ಭೇಟಿ ಮಾಡಲು ಬಯಸಿದ್ದಾರೆ. ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲ ಆಗುವ ತೀರ್ಪು ಕೊಟ್ಟಿದೆ. ಕರ್ನಾಟಕದ ಜಾಗದಲ್ಲಿ ಕರ್ನಾಟಕ ಸಮತೋಲನ ಅಣೆಕಟ್ಟೆ ಕಟ್ಟಲು ಬೇರೆ ರಾಜ್ಯಗಳ ಅನುಮತಿ ಅನಗತ್ಯ, ಆಕ್ಷೇಪ ವ್ಯಕ್ತಪಡಿಸಲು ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.

ಇವತ್ತು ರಾಜ್ಯಸಭೆಯಲ್ಲಿ ಕೂಡ ಜಲಶಕ್ತಿ ಸಚಿವರು ತಮಿಳುನಾಡಿನ ಅನ್ಕುಮಾರ್ ರಾಮದಾಸ್ ಅವರ ಪ್ರಶ್ನೆಗೆ ಉತ್ತರ ಕೊಡುವಾಗ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕರ್ನಾಟಕದ ಪರವಾಗಿ ಧನ್ಯವಾದ ಹೇಳುತ್ತೇನೆ.

ಕೃಷ್ಣ ನ್ಯಾಯಮಂಡಳಿಯ ನೀರು ಹಂಚಿಕೆ ತೀರ್ಮಾನ ಗೆಜೆಟ್ ನೋಟಿಫಿಕೇಶನ್ ಆಗಬೇಕಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿತ್ತು. ಅದನ್ನು ಇತ್ಯರ್ಥ ಪಡಿಸಲು ವಿಶೇಷ ಪೀಠ ಸ್ಥಾಪನೆ ಕುರಿತು ಇವತ್ತು ಸುಪ್ರೀಂ ಕೋರ್ಟ್ನಲ್ಲಿ ತೀರ್ಮಾನ ಆಗಿದೆ.

ಮಹದಾಯಿ ಯೋಜನೆ ಅಡೆತಡೆ ನಿವಾರಣೆಗೆ ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

ನಮ್ಮ ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ನಮ್ಮ ಯೋಜನೆ ಫಾಲೋ ಅಪ್ ಮಾಡಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ಹೊಸ ತಂಡ ರಚಿಸಲಾಗುವುದು. ನಿಮಗೆ ಪೂರಕ ಮಾಹಿತಿ ಒದಗಿಸಲು ಈ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಚರ್ಚೆಯಾದ ಅಂಶಗಳು:

  • 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ
  • ಬೆಂಗಳೂರಿನ STRR (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಯೋಜನೆ ಅನುಮೋದನೆ ಬಾಕಿ ಬಗ್ಗೆ ಚರ್ಚೆ
  • ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ದೊರಕಿಸಿಕೊಡಲು ಕೋರಿಕೆ
  • ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಜಾರಿ ಕ್ರಮಕ್ಕೆ ಮನವಿ
  • ವಾಣಿಜ್ಯ ಉದ್ದೇಶಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒತ್ತಡ
  • ಸಾಗರಮಾಲಾ 2.0 ಕಾರ್ಯಯೋಜನೆಗೆ ತಕ್ಷಣ ಅನುಮೋದನೆ ಬೇಕು
  • ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ
  • ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು ಅಗತ್ಯ
  • ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ CAMPA ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ.
  • ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ ಸಂಬಂಧ 15.12.2025ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ 40 ಎಕರೆ, ಬೆಳಗಾವಿಯಲ್ಲಿ 668 ಎಕರೆ ಭೂಮಿ ವರ್ಗಾವಣೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.
  • ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗವನ್ನು ಹೈಸ್ಪೀಡ್ ಮಾರ್ಗಕ್ಕೆ ಸೇರಿಸಲು ರಾಜ್ಯ ಮನವಿ ಮಾಡಿದ್ದು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ವೇಗದ ಸಂಚಾರ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸಂಬಂಧಿತ ಕೇಂದ್ರ ಸಚಿವಾಲಯದಿಂದ ಅನುಮೋದನೆ ಕೊಡಿಸಬೇಕು.
  • ಪೊಲೀಸ್ ಆಧುನೀಕರಣಕ್ಕೆ ICJS 2.0 ಯೋಜನೆಗೆ ₹270.71 ಕೋಟಿ. ASUMP ಯೋಜನೆಯಡಿ ₹280 ಕೋಟಿ ಬಿಡುಗಡೆ ಬಾಕಿ. ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಅನುದಾನ ಕೊಡಿಸಬೇಕು.

ರಾಜ್ಯದ ವಿವಿಧ ವಿಧೇಯಕಗಳು:

  • ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015.
  • ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, 2024.
  • ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
  • ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
    ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು ಎಂದು ಎಲ್ಲಾ ಸಂದರಿಗೆ ಸಿಎಂ ಮವವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular