HomeKarnatakaಮೇ 16 ರಿಂದ ಪ್ರತಿ ಶನಿವಾರ ಇ-ಖಾತಾ ಅಭಿಯಾನ: ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ...

ಮೇ 16 ರಿಂದ ಪ್ರತಿ ಶನಿವಾರ ಇ-ಖಾತಾ ಅಭಿಯಾನ: ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. ‘ನಮ್ಮ ಇ ಖಾತಾ’ ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಲಿಕೆ ಕಚೇರಿಗಳಲ್ಲಿ ಜನಸಂದಣಿ ಉಂಟಾಗಬಹುದು ಎಂದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರತಿ ವಾರ ಅಂದಾಜು 5 ಸಾವಿರ ಜನರ ದೂರುಗಳಿಗೆ ಪರಿಹಾರ ನೀಡಲಾಗುವುದು. ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು, ಕಡಿಮೆ ದಟ್ಟಣೆ ಇರುವ ಕಡೆ ಕಡಿಮೆ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಕೌಂಟರ್ ಗಳ ಬಗ್ಗೆ ಜಾಹೀರಾತು, ಕಟೌಟ್, ವೆಬ್ ಸೈಟ್ ಸೇರಿದಂತೆ ಎಲ್ಲಾ ಕಡೆ ಮಾಹಿತಿ ನೀಡಲಾಗುವುದು. ದಾಖಲೆ ತಕರಾರು ಇರುವ ಕಡೆ, ಅನುಮಾನ ಇರುವ ಕಡೆ ಕಂದಾಯ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಬಗೆಹರಿಸಲಾಗುವುದು ಎಂದರು.

ಫೋಟೋ, ಸ್ಕೆಚ್, ನಕ್ಷೆ, ಜಿಪಿಎಸ್ ಸೇರಿದಂತೆ ಭಾವಚಿತ್ರ ಎಲ್ಲವೂ ದಾಖಲೆಯಲ್ಲಿ ಇರುವುದು. ಆಧಾರ್ ಸೇರಿದಂತೆ ನಿಗದಿತ ಸಂಖ್ಯೆ ನೀಡಿದರೆ ಈ ದಾಖಲೆಗಳನ್ನು ಯಾರು ಬೇಕಾದರೂ ನೋಡಬಹುದು. ಕಂದಾಯ ಅಧಿಕಾರಿ, ಡೆಪ್ಯುಟಿ ಸೆಕ್ರೆಟರಿ, ಜಂಟಿ ಕಾರ್ಯದರ್ಶಿ ಇದರ ಜವಾಬ್ದಾರಿ ಹೊಂದಿರುತ್ತಾರೆ. ಎರಡನೇ, ನಾಲ್ಕನೇ ಶನಿವಾರ ಕೆಲಸ ಮಾಡುವ ಅಧಿಕಾರಿಗಳಿಗೆ ಪರ್ಯಾಯವಾಗಿ ಇನ್ನೊಂದು ದಿನ ರಜೆ ನೀಡಲಾಗುವುದು ಎಂದರು.

10 ತಿಂಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆ

ಸ್ವಾಧೀನ ಪತ್ರ ಹೊಂದಿರುವ ಅಪಾರ್ಟ್ಮೆಂಟ್ ಗಳ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡಿಕೊಡಲಾಗುವುದು. 10 ತಿಂಗಳಲ್ಲಿ ಆನ್ ಲೈನ್ ಮೂಲಕ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮಾಡಿರುವುದು ಇಡೀ ದೇಶದಲ್ಲಿ ದಾಖಲೆ ಬರೆದಿದೆ. 37,480 ಫ್ಲಾಟ್ ಗಳಿಗೆ ಓಸಿ ನೀಡಲಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲಾ ಅಧಿಕಾರಿಗಳು, ಮನೀಶ್ ಮೌದ್ಗಿಲ್ ಅವರು, ಜಿಬಿಎ ಕಮಿಷನರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

10 ಲಕ್ಷ ಜನರಿಗೆ ಈಗಾಗಲೇ ವಾಟ್ಸಪ್ ಮೂಲಕ ಖಾತೆಗಳ ಡಿಜಿಟಲ್‌ ಪ್ರತಿ ಕಳಿಸಲಾಗಿದೆ. ಮಿಕ್ಕವರಿಗೆ ಕಳಿಸಲಾಗುತ್ತದೆ. ಭೌತಿಕ ಪ್ರತಿಗಳನ್ನು ಮನೆಗಳಿಗೆ ಕಳಿಸಲಾಗುತ್ತದೆ. ನಮ್ಮ ಈ ಭೂಮಿ ಗ್ಯಾರಂಟಿ ಮೆಚ್ಚಿ ಕೇಂದ್ರ ಸರ್ಕಾರ ರಾಷ್ಟ್ರೀಯ ಇ ಆಡಳಿತ ಚಿನ್ನದ ಪ್ರಶಸ್ತಿ ನೀಡಿದೆ. ನಾವು ಇಂತಹ ದಾಖಲೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಎಣಿಸಿರಲಿಲ್ಲ. 13 ಲಕ್ಷ ಇ ಖಾತೆಗಳನ್ನು ಆಸ್ತಿ ತೆರಿಗೆ ಆದಾರದಲ್ಲಿ ಸೃಷ್ಟಿಸಿ ಒಂದೇ ದಿನದಲ್ಲಿ ಎಸ್ ಎಂಎಸ್ ಮೂಲಕ ನೀಡಲಾಗಿದೆ ಎಂದರು.

ಅನೇಕ ಕಡೆ ತಿದ್ದುವ, ನಕಲು ಮಾಡುವ ಅವಕಾಶವಿತ್ತು ಅದಕ್ಕೆಲ್ಲಾ ಕಡಿವಾಣ ಹಾಕಿ ಬೆರಳ ತುದಿಯಲ್ಲಿ ಅತ್ಯುತ್ತಮ ಸೇವೆಯನ್ನು ಜನರಿಗೆ ನೀಡಲಾಗಿದೆ. 200 ಜನ ಸಿಬ್ಬಂದಿ 10 ತಿಂಗಳ ಕಾಲ ಈ ಕೆಲಸ ನಿರ್ವಹಣೆ ಮಾಡಲಾಗಿದೆ. ಇದಕ್ಕೆ ಸುಮಾರು 2 ಕೋಟಿ ಹಣ ಖರ್ಚು ಮಾಡಲಾಗಿದೆ. ಇದರಿಂದ ಸರಿಯಾದ ಆಸ್ತಿ ದಾಖಲೆ ಸೇರಿದಂತೆ ನಮ್ಮ ನಿವೇಶನದ ಸರಿಯಾದ ಅಳತೆ ಸಿಕ್ಕಿದೆ ಎಂದು ನಿವೃತ್ತ ಅಧಿಕಾರಿಗಳು, ಜನರು ನನಗೆ ಈ ಮೇಲ್ ಮಾಡಿದ್ದಾರೆ ಎಂದರು.

ಬಿ ಖಾತೆಯಿಂದ ಎ ಖಾತೆ ನೀಡುವ ಅಭಿಯಾನ ಪ್ರಾರಂಭ ಮಾಡಲಾಗುವುದು. ಕೆಳ ಹಂತದ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣಕ್ಕೆ ಮನೆ ಬಾಗಿಲಿಗೆ ತೆರಳಿ ಖಾತೆ ನೀಡಲಾಗುವುದು. ಅನೇಕ ಕಡೆ 10 ರಿಂದ 5 ಸಾವಿರ ಲಂಚ ಬೇಡಿಕೆ ಬಂದಿದೆ ಎನ್ನುವ ದೂರು ಬಂದಿದೆ. ಇದರ ಬಗ್ಗೆ ನಾನೂ ತನಿಖೆ ನಡೆಸಿದ್ದೇನೆ. ಅದಕ್ಕೆ ಈ ದುರುಪಯೋಗ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಪಾರದರ್ಶಕ, ಪರಿಶುದ್ದ ಆಡಳಿತ ನೀಡಬೇಕು ಎಂದು ಹೊರಟಿದ್ದೇವೆ ಎಂದರು.

ಬೆಂಗಳೂರು ಇಡೀ ವಿಶ್ವಕ್ಕೆ ಮಾದರಿಯಾದ ನಗರ. ಇಲ್ಲಿನ ನಾಗರಿಕರ ಆಸ್ತಿ ದಾಖಲೆಗಳು ಸರಿಯಾಗಿ ಇರಬೇಕು ಎಂದು ಈ ಕ್ರಮ ತೆಗೆದುಕೊಂಡಿದ್ದೇವೆ. ನಾಳೆಯಿಂದಲೇ ಅರ್ಜಿ ಸಲ್ಲಿಕೆ ಮಾಡಬಹುದು. ದಾಖಲೆಗಳು ಸರಿಯಿದ್ದರೆ ಸ್ಥಳದಲ್ಲೇ ಖಾತೆ ಮಾಡಿಕೊಡಲಾಗುವುದು. ಇಲ್ಲದಿದ್ದರೆ ಏನು ಮಾಡಬಹುದು ಎಂದು ಸೂಚನೆ ನೀಡಲಾಗುವುದು ಎಂದರು.

ಈ ಹಿಂದೆ ನನ್ನ ತಂಗಿಗೆ ಆಸ್ತಿ ಖರೀದಿ ಮಾಡಿದ್ದೇ. ಆದರೆ ಬೇರೆಯವರಿಗೆ ಖಾತೆಯಾಯಿತು. ನಮಗೆ ಖಾತೆಯೇ ಆಗಲಿಲ್ಲ. ಇಂತಹ ಹಗರಣಗಳು ನಡೆಯುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ನಮ್ಮ ಬಳಿ ಎಷ್ಟು ಬಿ ಖಾತೆಯಿದೆ ಎನ್ನುವ ಮಾಹಿತಿಯಿದೆ. ದಿನಕ್ಕೆ ಎಷ್ಟು ಮಾಡಲಾಗುವುದು ಎಂಬುದು ಪ್ರಾರಂಭ ಮಾಡಿದಾಗಲೇ ತಿಳಿಯುವುದು. ಮೊದಲ ಮೂರು ತಿಂಗಳು ಇದನ್ನ ಮಾಡಲಾಗುವುದು ಎಂದರು‌.

ಮೊದಲು ಭೂಮಿಯನ್ನು ಸಕ್ರಮ ಮಾಡಲಾಗುವುದು. ನಂತರ ಕಟ್ಟಡ. ಏಕೆಂದರೆ ಇದಕ್ಕೆ ಸಾಕಷ್ಟು ಹಂತಗಳಿವೆ. 7 ಸಾವಿರ ಆಸ್ತಿಗಳಿಗೆ ಎ ಖಾತೆ ಅರ್ಜಿ ವಿಲೇ ಮಾಡಲು ಕ್ರಮವಹಿಸಲಾಗಿದೆ. ಇವರು ಹಣ ಕಟ್ಟಿದ ತಕ್ಷಣ ಖಾತೆಯನ್ನು ಹಸ್ತಾಂತರಿಸಲಾಗುವುದು. ಇವರು ಹಣ ಕಟ್ಟಿದರೆ 300 ಕೋಟಿ ಆದಾಯ ಬರಲಿದೆ. ಏರಿಯಾಗೆ ಅನುಗುಣವಾಗಿ ಸ್ಲಾಬ್ ಗಳನ್ನು ನಿಗದಿ ಮಾಡಲಾಗಿದೆ. ಪ್ರತಿಯೊಂದು ಹೊಸ ಅರ್ಜಿಯನ್ನು 15 ದಿನಗಳಲ್ಲಿ ವಿಲೇ ಮಾಡಲಾಗುವುದು ಎಂದರು.

ಯಾರು ಆಸ್ತಿಯನ್ನು ಮಾರಾಟ ಮಾಡಬೇಕು ಎಂದು ಹೊರಡುತ್ತಾರೋ ಅವರಿಗೆ ಇದು ಬೇಕಾಗಿದೆ. ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಸುಮ್ಮನಿದ್ದಾರೋ ಅವರು ಹಾಗೆಯೇ ಇದ್ದಾರೆ. ಕೆಲವರಿಗೆ ಸರಿಯಾದ ಮಾಹಿತಿಯಿಲ್ಲ, ದಾಖಲೆಯಿಲ್ಲ. ನಾವು ಕೇಳಿದ ದಾಖಲೆಗಳನ್ನು ನೀಡಿದರೆ ಮಾಡಿಕೊಡಲಾಗುವುದು ಎಂದರು.

ಬೆಂಗಳೂರು ಬೆಳೆಯುತ್ತಿದೆ. ಕಂದಾಯ ಸೈಟ್ ಗಳನ್ನು ತೆಗದುಕೊಂಡವರು ಸಾಲ ತೆಗೆದುಕೊಳ್ಳಲು ದಾಖಲೆಗಳಿಲ್ಲದೇ ಒದ್ದಾಡುತ್ತಿದ್ದಾರೆ‌. ಓಸಿ ನೀಡುತ್ತಿಲ್ಲ, ಮನೆ ಕಟ್ಟಲು ಪ್ಲಾನ್ ಗಳನ್ನು ಕೊಡಲು ಆಗುತ್ತಿಲ್ಲ ಎಂದರು.

ಎಲ್ಲವನ್ನು ಉಚಿತವಾಗಿ ನೀಡಲು ಆಗುವುದಿಲ್ಲ. ಆಸ್ತಿ ಮೌಲ್ಯ ಹೆಚ್ಚಾಗಿದೆಯಲ್ಲ. ಬಂಗಾರಪ್ಪ ಅವರ ಕಾಲದಲ್ಲಿ 50/80 ನಿವೇಶನ ನೀಡಿದ್ದರು. ಆಗ 99 ಸಾವಿರ ಕಟ್ಟಿದ್ದೆ. ಈಗ ಅದರ ಮಾರುಕಟ್ಟೆ ಬೆಲೆ ಚದರ ಅಡಿಗೆ 20 ಸಾವಿರವಿದೆ. ಅಂದರೆ 8-9 ಕೋಟಿ ಆಯಿತು. ಈ ಹಿಂದೆ ಕೋರಮಂಗಲದಲ್ಲಿ ಹೌಸಿಂಗ್ ಬೋರ್ಡ್ ಇಂದ 600 ರೂಪಾಯಿಗೆ ಮನೆ ಕಟ್ಟಿಕೊಡಲಾಗಿತ್ತು. ಈಗ ಮೌಲ್ಯ ಹೆಚ್ಚಾಗಿಲ್ಲವೇ? ಈಗ ಅದೇ ಜಾಗಗಳು 10 ಸಾವಿರ ಚದರ ಅಡಿಗೆ ಆಗಿದೆ ಎಂದರು.

ಅನೇಕ ವರ್ಷಗಳಿಂದ ಇವರಿಗೆ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಹಲವಾರು ಮೂಲಸೌಕರ್ಯಗಳನ್ನು ಒದಗಿಸಿದ್ದೇವೆ. ಕಂದಾಯ ಬಡಾವಣೆಗಳ ಖಾಸಗಿ ರಸ್ತೆಗಳನ್ನು ಸರ್ಕಾರದ ಆಸ್ತಿ ಎಂದು ಕ್ಯಾಬಿನೆಟ್ ಅಲ್ಲಿ ನಿರ್ಧಾರ ಮಾಡಿ ಘೋಷಣೆ ಮಾಡಲಾಗಿದೆ. ಪಾಲಿಕೆಗಳ ಖಾಯಂ ಆಸ್ತಿ ಎಂದು ತಿಳಿಸಲಾಗಿದೆ. ಯಾರು ಸರಿಯಾಗಿ ಮಾಹಿತಿ ಇಟ್ಟುಕೊಂಡಿಲ್ಲ, ಯಾರ ಬಳಿ ದಾಖಲೆ ಸರಿಯಿಲ್ಲ, ಕಾನೂನಿನ ವಿರುದ್ದ ಇರುವವರು ವಿರೋಧ ಮಾಡುತ್ತಿದ್ದಾರೆ ಎಂದರು.

ಹಳ್ಳಿಯಿಂದ ಬಂದವರು, ಬೀದಿ ಬದಿ ವ್ಯಾಪಾರಿಗಳು ಕಷ್ಟ ಪಟ್ಟು ಸೈಟ್ ತೆಗೆದುಕೊಂಡಿರುತ್ತಾರೆ. ಅವರಿಗೆ ರಿಜಿಸ್ಟ್ರೇಷನ್ ಸೇರಿದಂತೆ ಯಾವ ಕಾನೂನಾತ್ಮಕ ಪ್ರಕ್ರಿಯೆಗಳು ಗೊತ್ತಿರುವುದಿಲ್ಲ. ಇಂತಹವರಲ್ಲಿ ಯಾರ ದಾಖಲೆಗಳು ಸರಿ ಇವೆಯೋ ಅದನ್ನು ಪರಿಶೀಲಿಸಲು ರೌಂಡ್ ರಾಬಿನ್ ಪದ್ದತಿ ತಂದಿದ್ದರು. ಎ ಖಾತೆ ವಿಚಾರದಲ್ಲಿ ಅನೇಕರು ಪ್ರಗತಿ ಕಂಡಿಲ್ಲ ಎಂದು ಸದನದಲ್ಲಿ ಸೇರಿದಂತೆ ಅನೇಕರು ಟೀಕೆ ಮಾಡಿದರು. ಇದಕ್ಕೆ ಎಲ್ಲರಿಗೂ ಲೆಕ್ಕ ಕೊಡಲು ನಾನು ತಯಾರಿದ್ದೇನೆ. ಯಾರ ಬಳಿ ದಾಖಲೆ ಸರಿ ಇಲ್ಲವೋ ಅವರು ತಕರಾರು ತೆಗೆಯುತ್ತಿದ್ದಾರೆ ಎಂದರು.

ಬಿಡದಿ ಟೌನ್ ಶಿಪ್ ಅಲ್ಲಿ ಪರಿಹಾರ ಭೂಮಿ ವಿಚಾರವಾಗಿ ಕುಮಾರಸ್ವಾಮಿ ಅವರು 8 ಸಾವಿರ ಅಡಿ ನೀಡುತ್ತೇನೆ ಎಂದು ಹೇಳಿದ್ದರು. ನಾನು 9, 400 ಅಡಿ ನೀಡುತ್ತಿದ್ದೇನೆ. ಬಿಡದಿಯ ಭೂ ಮಾಲೀಕರಿಗೆ ಲಾಟರಿ ಹೊಡೆದಂತೆ. ಒಂದು ಎಕರೆ ಕಳೆದುಕೊಂಡಿದ್ದರೆ ಭೂ ಮಾಲೀಕನಿಗೆ ಒಂದೇ ಕಡೆ 9,400 ಅಡಿ ಭೂಮಿ ನೀಡಲಾಗುತ್ತಿದೆ. ಜೊತೆಗೆ 6 ರಷ್ಟು ಎಫ್ ಎಆರ್ ಸೇರಿಸಿಕೊಳ್ಳುವ ಅವಕಾಶ ನೀಡಲಾಗಿದೆ. 30/40 ಅಳತೆ ನಿವೇಶನ ಹೊಂದಿದ್ದರೆ ಇದು ದೊರೆಯುವುದಿಲ್ಲ. ಹೆಚ್ಚಿನ ರೈತರು ಹಣ ತೆಗೆದುಕೊಳ್ಳುವುದಿಲ್ಲ. ಆಸ್ತಿ ಉಳಿಸಿಕೊಳ್ಳಲು ನೋಡುತ್ತಾರೆ. ಹೊಸ ಮಾಡ್ರನ್ ಸಿಟಿ ಬೆಂಗಳೂರು ದಕ್ಷಿಣದಲ್ಲಿ ತಲೆಯೆತ್ತಲಿದೆ. ಭೂ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ. ಯಾರೂ ಭೂಮಿ ಮಾರಿಕೊಳ್ಳಲು ಹೋಗಬೇಡಿ. ಬ್ರೋಕರ್ ಗಳ ಕೈಗೆ ಸಿಲುಕಬೇಡಿ. 2-3 ಕೋಟಿ ಪರಿಹಾರ ತೆಗೆದುಕೊಳ್ಳಲೂ ಹೋಗಬೇಡಿ. ಭೂಮಿ ಉಳಿಸಿಕೊಳ್ಳಿ ಎಂದರು.

ಬಿಡದಿ ರೈತರ ಹೋರಾಟದ ವಿಚಾರವಾಗಿ ವಿರೋಧ ಪಕ್ಷದವರು ಎತ್ತಿ ಕಟ್ಟುತ್ತಾರೆ. ಹೋರಾಟ ಮಾಡುತ್ತಾರೆ. ಬೆಂಗಳೂರು ನಗರದ ದಟ್ಟಣೆ ತಪ್ಪಿಸಲು ಏನು ಮಾಡಬೇಕು? ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಮಾಡಲಾಗಿದೆ. ಕಮರ್ಷಿಯಲ್ ಅವರಿಗೆ ಶೇ 45 ಭಾಗ, ರೆಸಿಡೆನ್ಸಿಯಲ್ ಗೆ 50 ಭಾಗ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಬೇಡ ಎನ್ನುವವರು ಬಿಟ್ಟು ಬಿಡಲಿ. ಡೆಪಾಜಿಟ್ ಮಾಡಿ ನಮ್ಮ‌ ಕೆಲಸ ನಾವು ಮಾಡುತ್ತೇವೆ. ಟೀಕೆ ಸಾಯುತ್ತವೆ.‌‌ ಕೆಲಸಗಳು ಉಳಿಯುತ್ತವೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular