ಬೆಂಗಳೂರು: ವಾಣಿಜ್ಯ ಸಿಲಿಂಡರ್ ಗಳ ಬೆಲೆ ಭಾರಿ ಏರ್ಕೆಯಾಗಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಜನಸಾಮಾನ್ಯರ ಮೇಲೆಯೇ ಹೋಗುತ್ತದೆ. ಇದರಿಂದಾಗಿ ಅನೇಕ ಹೊಟೇಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು. ಸರ್ಕಾರ ಜನರ ಮೇಲಿನ ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ ದಾರಿಯನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ಎಂದರು.
ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ? ನಿನ್ನೆ ಸಚಿವ ಸಂಪುಟ ಸಭೆಯಲ್ಲಿ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ವಿಚಾರ ಬಿಟ್ಟು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಬಗ್ಗೆ ಮಾತ್ರ ಮಾತನಾಡುವುದೇಕೆ? ಎಂದು ಹೇಳಿದರು.

