ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಖಚಿತವಾಗಿದ್ದು, ನಾಳೆ ಗುರುವಾರ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರೆಂದು ಬಿಂಬಿಸುವ ಪೋಸ್ಟರ್ ಅಭಿಯಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ. ‘ಟೀಮ್ ಡಿಕೆ’ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಡಿ.ಕೆ. ಶಿವಕುಮಾರ್ ಅವರ 45 ವರ್ಷಗಳ ರಾಜಕೀಯ ಅನುಭವ ಮತ್ತು ತಳಮಟ್ಟದಿಂದ ಬೆಳೆದು ಬಂದ ಹಾದಿಯನ್ನು ಉಲ್ಲೇಖಿಸಿ, ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತರೆಂದು ಪ್ರಚಾರ ಮಾಡಲಾಗುತ್ತಿದೆ.
ದೆಹಲಿಯಲ್ಲಿ ಮಂಗಳವಾರ ಎಐಸಿಸಿ ನಾಯಕರು ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ನಡೆದ 7 ಗಂಟೆಗಳ ಸುದೀರ್ಘ ಸಂಧಾನ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗಕ್ಕೆ ಒಪ್ಪಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮುಂಚಿತವಾಗಿ ಮಾಡಿಕೊಂಡಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ ನಾಳೆ ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ರಾಜ್ಯಸಭಾ ಸ್ಥಾನದ ಆಫರ್ ಹಾಗೂ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸದಾಗಿ ರಚನೆಯಾಗಲಿರುವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಪಟ್ಟ ನೀಡುವ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ.
ಹೈಕಮಾಂಡ್ ನಯಕರ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಯ ಖಾಸಗಿ ಸ್ಥಳದಲ್ಲಿ ಆಪ್ತ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಹಾಗೂ ಭೈರತಿ ಸುರೇಶ್ ಅವರೊಂದಿಗೆ ತುರ್ತು ಸಭೆ ನಡೆಸಿ ಹೈಕಮಾಂಡ್ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಪ್ತ ಸಚಿವರು, ‘ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡಬೇಡಿ, ನಿಮ್ಮ ಪರವಾಗಿ ನಾವೇ ಹೈಕಮಾಂಡ್ ಜೊತೆ ಮತ್ತೊಮ್ಮೆ ಮಾತನಾಡುತ್ತೇವೆ’ ಎಂದು ಭಾವುಕರಾಗಿ ಒತ್ತಡ ಹೇರಿದ್ದಾರೆ. ಆದರೆ ಸಚಿವರ ಮನವಿಗೆ ಉತ್ತರಿಸಿದ ಸಿದ್ದರಾಮಯ್ಯ, ‘ರಾಹುಲ್ ಗಾಂಧಿ ಅವರ ಮಾತನ್ನು ನಿರಾಕರಿಸಲು ನನ್ನಿಂದ ಸಾಧ್ಯವಿಲ್ಲ. ಕೊಟ್ಟ ಮಾತಿನಂತೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ’ ಎಂದು ಹೇಳುವ ಮೂಲಕ ಆಪ್ತರ ಒತ್ತಡಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ.

