HomeKarnatakaಸ್ಯಾಮ್ ಪಿತ್ರೊಡಾ ಹೇಳಿಕೆ ಅವರ ವೈಯಕ್ತಿಕ; ಇದನ್ನು ನಾವು ಒಪ್ಪಲ್ಲ; ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ...

ಸ್ಯಾಮ್ ಪಿತ್ರೊಡಾ ಹೇಳಿಕೆ ಅವರ ವೈಯಕ್ತಿಕ; ಇದನ್ನು ನಾವು ಒಪ್ಪಲ್ಲ; ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್ ನ್ನೂ ಹಾಕಲ್ಲ. ಸ್ಯಾಮ್ ಪಿತ್ರೊಡಾ ಹೇಳಿಕೆ ಅವರ ವೈಯಕ್ತಿಕ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಿತ್ರಾರ್ಜಿತ ಆಸ್ತಿಯಲ್ಲಿ 50% ಸರ್ಕಾರ ಪಡೆಯಬೇಕು ಎಂಬ ಪಿತ್ರೊಡಾ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ತೀರ್ಮಾನವಾಗಿಲ್ಲ. ಇದು ಭಾರತ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ. ಈ ಬಗ್ಗೆ ಜೈರಾಮ್ ರಮೇಶ್ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದರು.

ಯಾವುದೇ ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಇಲ್ಲ. ಅದು ಸುಳ್ಳು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದೇಶದಲ್ಲಿ ರಾಜಕಾರಣದಲ್ಲಿ ತಂದೆ ಹಾಗೂ ಪೂರ್ವಜರ ಹೆಸರಿನಲ್ಲಿ ಚುನಾವಣೆ ಮಾಡುತ್ತಿರುವಾಗ ಅವರ ಆಸ್ತಿ ವರ್ಗಾವಣೆಗೆ ಅವಕಾಶ ನೀಡುತ್ತಾರಾ? ದೇಶದ ಸಂಪತ್ತನ್ನು ನಗದೀಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಧ್ಯಮ ವರದಿ ಓದಿದ್ದ ನೆನಪು ನನಗೆ. ನಮ್ಮ ಪ್ರಣಾಳಿಕೆಯಲ್ಲಿರುವ ಅಂಶಗಳು ಮಾತ್ರ ಪಕ್ಷದ ನಿಲುವು. ಅದರಿಂದಾಚೆಗಿನ ಅಂಶಗಳಿಗೆ ಪಕ್ಷಕ್ಕೆ ಸಂಬಂಧವಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿತ್ರೋಡಾ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯ ಅಲ್ಲ. ಇಂತಹ ಚರ್ಚೆ ಪಕ್ಷದಲ್ಲಿ ಆಗಿಲ್ಲ. ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದೂ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆರೋಪ ವಿಚಾರವಾಗಿ, ಸೋಲಿನ ಅರಿವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿಯವರು ಸುಳ್ಳಿನ ಟೀಕೆ ಮಾಡ್ತಿದ್ದಾರೆ.
ಪ್ರಧಾನಯವರು ಹತಾಶೆ ಹೇಳಿಕೆ ನೀಡುತ್ತಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅವರ ಪಕ್ಷದ ನೆಲೆ ಇಲ್ಲ. ಹೀಗಾಗಿ ಆಂಧ್ರದಲ್ಲಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರ ಇಲ್ಲ. ಕರ್ನಾಟಕದಲ್ಲೂ ಅವರು ಎರಡಂಕಿ ಸ್ಥಾನ ಪಡೆಯಲ್ಲ. ಹೀಗಾಗಿ ಹತಾಶೆಯಿಂದ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆದಾಗ 2,800 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನ ಈಗ 7,500 ಆಗಿದೆ. ನಮ್ಮ ಮಹಿಳೆಯರು ಮಂಗಳಸೂತ್ರ ಹಾಕಲಾಗದಂತೆ ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ. ಈ ವಿಚಾರವಾಗಿ ನಾನು ನಮ್ಮ ಪಕ್ಷಕ್ಕೆ ಒಂದು ಸಲಹೆ ನೀಡುತ್ತಿದ್ದೇನೆ. ನಮ್ಮ ದೇಶ, ಧರ್ಮ ಕಾಪಾಡಿಕೊಳ್ಳಬೇಕು.

ಪ್ರಿಯಾಂಕ ಗಾಂಧಿ ಅವರು ಬೆಂಗಳೂರಿನಲ್ಲಿ ನನ್ನ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯಸೂತ್ರ ತ್ಯಾಗ ಮಾಡಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ. ಇದನ್ನು ಮೋದಿ ಅವರು ಅರಿತುಕೊಳ್ಳಬೇಕು. ಅವರ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಜನ ಅವರಿಗೆ ಹತ್ತು ವರ್ಷಗಳ ಕಾಲ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಕೊಟ್ಟಿರುವ ಗೌರವವನ್ನು ಕಾಪಾಡಿಕೊಳ್ಳಬೇಕು. ಈ ರೀತಿ ದೇಶಕ್ಕೆ ಅಪಮಾನ ಮಾಡಬಾರದು ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

Most Popular