ನಾವು ಕೇಳುತ್ತಿರುವುದು ಬರ ಪರಿಹಾರ ಹೊರತು ಭಿಕ್ಷೆಯನ್ನಲ್ಲ; ಹೊಟ್ಟೆ ಹಸಿದಾಗ ಹಣ ಕೊಡದೆ ಆನಂತರ ಕೊಟ್ಟರೆ ಏನು ಪ್ರಯೋಜನ?; ಡಿಸಿಎಂ ಆಕ್ರೋಶ

ಬೆಂಗಳೂರು: ನಾವು ರೈತರ ಹಿತಕ್ಕಾಗಿ ಬರ ಪರಿಹಾರ ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆ ಕೇಳುತ್ತಿಲ್ಲ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬರದ ಕಾರಣಕ್ಕೆ ರೈತರಿಗೆ ಕೆಲಸ ಸಿಗದೇ ಪರದಾಡುತ್ತಿದ್ದಾರೆ. ನರೇಗಾ ಕೆಲಸದ ಅವಧಿ ಹೆಚ್ಚಳ ಮಾಡಲಿಲ್ಲ. ನಾವು ಅವರ ಮನೆಯ ಹಣ ಕೇಳಿಲ್ಲ. ರಾಜ್ಯದ ಕಷ್ಟಕ್ಕೆ ಹಣ ಕೇಳಿದೆವು. ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಹಣ ಕೊಡಿ ಎಂದು ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಬರ ಪರಿಸ್ಥಿತಿ ಬಂದಿದೆ ಪರಿಹಾರ ನೀಡಿ ಎಂದು ಸೆಪ್ಟೆಂಬರ್ ತಿಂಗಳಲ್ಲೇ ಅರ್ಜಿ ಕೊಟ್ಟೆವು. ಅಲ್ಲಿಂದ ಇಲ್ಲಿಯ ತನಕ ಸುಮಾರು 50 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ. ನಾವು ಇಂತಹ ಕಷ್ಟದಲ್ಲೂ 2 ಸಾವಿರ ಕೊಟ್ಟಿದ್ದೇವೆ.

ಬರ ಪರಿಹಾರ ಕೊಡುವುದಿಲ್ಲ ಎಂದು ಗೊತ್ತಾದ ನಂತರ ಸುಪ್ರೀಂ ಕೋರ್ಟ್ ಗೆ ಹೋಗಿ ಹೋರಾಟ ಮಾಡಿ ಪರಿಹಾರ ಪಡೆಯಬೇಕಾಯಿತು. ಆದರೂ ಬಿಡಿಗಾಸಿನ ಪರಿಹಾರ ಘೋಷಿಸಿದ್ದಾರೆ. ಕೋರ್ಟ್ ಉಗಿದ ಮೇಲೆ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಇದು ಎಲ್ಲಿಗೆ ಸಾಕಾಗುತ್ತದೆ. ಇಷ್ಟು ಹಣವನ್ನು ಯಾರಿಗೆ ಎಂದು ಕೊಡುವುದು. ಹೊಟ್ಟೆ ಹಸಿದಾಗ ಹಣ ಕೊಡದೆ ಆನಂತರ ಕೊಟ್ಟರೆ ಏನು ಪ್ರಯೋಜನ? ಎಂದು ಕಿಡಿಕಾರಿದರು.

ಸೆಪ್ಟೆಂಬರ್ ನಿಂದ ಇಲ್ಲಿಯ ತನಕ ಆಗಿರುವ ಹೆಚ್ಚುವರಿ ನಷ್ಟಕ್ಕೆ ಕೇಂದ್ರ ನಾವು ಕೇಳಿರುವುದಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಬೇಕು. ಗ್ಯಾರಂಟಿ ಯೋಜನೆಗಳು ಇರುವ ಕಾರಣ 4 ಕೋಟಿಗೂ ಹೆಚ್ಚು ಕುಟುಂಬಗಳು, ಜನರು ಬರದಲ್ಲೂ ಜೀವನ ನಡೆಸುತ್ತಿದ್ದಾರೆ.

ಈ ರಾಜ್ಯಕ್ಕೆ ಬಿಜೆಪಿ ಮತ್ತು ದಳದವರಷ್ಟು ದ್ರೋಹ ಯಾರೂ ಬಗೆದಿಲ್ಲ. ಎರಡೂ ಪಕ್ಷಗಳ ಮುಖಂಡರುಗಳು ಈ ರಾಜ್ಯದ ದ್ರೋಹಿಗಳು. ರಾಜ್ಯದ ಹಿತಕ್ಕೆ ಒಮ್ಮೆಯೂ ದನಿ ಎತ್ತದವರು. ನಮ್ಮ ಹೋರಾಟ ನಿರಂತರ. ನಾವು ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ, ನಾವು ಈ ತಾರತಮ್ಯವನ್ನು ಖಂಡಿಸುತ್ತೇವೆ. ನ್ಯಾಯಾಲಯ ಮತ್ತು ಜನರ ನಡುವೆ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read