ಬೆಂಗಳೂರು: ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವುದೇ ಬಣದ ನಾಯಕನಲ್ಲ. ನಾನು 140 ಶಾಸಕರ ಅಧ್ಯಕ್ಷ. 140 ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೆಲವು ಶಾಸಕರು, ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದೆ ಎಂಬ ಬಗ್ಗೆ, ಯಾವ ಗುಂಪನ್ನು ದೆಹಲಿಗೆ ಕರೆದುಕೊಂಡು ಹೋಗಲು ನನಗೆ ಇಚ್ಛೆ ಇಲ್ಲ. ನಾನು ಗುಂಪುಗಾರಿಕೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗುವುದು ಸಹಜ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಹಕ್ಕು ಅವರಿಗೆ ಇದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ, ಮತ್ತೆ ಕೆಲವರು ತಾವಾಗಿಯೇ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಒಂದು ಪಕ್ಷದ ಶಾಸಕರು ಮಂತ್ರಿ, ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ. ಮುಖ್ಯಮಂತ್ರಿಗಳು ಐದು ವರ್ಷ ತಾವೇ ಸಿಎಂ ಆಗಿ ಇರುವುದಾಗಿ ಹೇಳಿದ್ದಾರೆ. ಐ ವಿಶ್ ಹಿಮ್ ಆಲ್ ದ ಬೆಸ್ಟ್ ಎಂದರು.
ಸಿಎಂ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನುಂಟು ಹೈಕಮಾಂಡ್ ಉಂಟು. ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಸಿಎಂ ಹೇಳಿದ್ದಾರೆ. ನಾನೂ ಹೇಳಿದ್ದೇನೆ. ಅದಕ್ಕೆ ನಾವು ಬದ್ಧ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದರು.
