ದಾವಣಗೆರೆ: ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ನಿವಾಸಿ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಕಲಿ ಆ್ಯಪ್ ಮೂಲಕ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 13,000 ಅಮಾಯಕ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ. 10,000 ರೂ. ಹೂಡಿಕೆ ಮಾಡಿದರೆ ಪ್ರತಿ ನಿತ್ಯ 400 ರೂ. ಲಾಭ ಬರುತ್ತದೆ ಎಂದು ಆಮಿಷ ಒಡ್ಡಿ, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಪಕಿಯನ್ನು ಬಳಸಿಕೊಂಡು ಬಡ ಜನರನ್ನು ಈ ಗ್ಯಾಂಗ್ ಲೂಟಿ ಮಾಡಿತ್ತು.
ನಾವಾಬಿಟ್.ಇನ್ (Navabit.in) ಎಂಬ ನಕಲಿ ಜಾಲತಾಣ ಹಾಗೂ ಆ್ಯಪ್ ರೂಪಿಸಿ ಇದರಲ್ಲಿ ಕನಿಷ್ಠ 10,000 ರೂಪಾಯಿ ಹೂಡಿಕೆ ಮಾಡಿದರೆ, ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ದಿನಕ್ಕೆ 300 ರಿಂದ 400 ರೂಪಾಯಿ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಹಣವನ್ನು ಜಮೆ ಮಾಡಿ ನಂಬಿಕೆ ಗಳಿಸಿದ್ದ ಖದೀಮರು, ಬಳಿಕ ಹಣ ನೀಡದೇ ವಂಚಿಸಿದ್ದಾರೆ.
ಸ್ಥಳೀಯ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೇ ಈ ದಂಧೆಯಲ್ಲಿ ಭಾಗಿಯಾಗಿ ಜನರನ್ನು ಸೆಳೆಯುತ್ತಿದ್ದರು. ವಂಚನೆಗೆ ಒಳಗಾದ ಸಾದಿಕ್ ಎಂಬುವವರು, ಮುಖ್ಯೋಪಾಧ್ಯಾಯಿನಿ ಒತ್ತಡ ಹೇರಿ ನನ್ನಿಂದ ಮೊದಲು 10,000 ರೂ. ಹೂಡಿಕೆ ಮಾಡಿಸಿದ್ದರು. ಒಂದು ತಿಂಗಳು ದಿನಾಲೂ 300 ರೂ. ಬಂತು. ಆಮೇಲೆ ದೊಡ್ಡ ಆಫರ್ ಇದೆ ಎಂದು ನಂಬಿಸಿ 50 ಸಾವಿರದಿಂದ 5 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡರು. ಸಾಲ ಮಾಡಿ ಹಣ ಹಾಕಿದ್ದೆವು, ಆದರೆ ರಂಜಾನ್ ಹಬ್ಬದ ವೇಳೆ ಹಣ ಡ್ರಾ ಮಾಡಲು ಹೋದಾಗ ಖಾತೆ ಬ್ಲಾಕ್ ಆಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಬಡ ಮಹಿಳೆಯರು, ದಿನಗೂಲಿ ನೌಕರರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 13,000 ಜನ ಈ ಆ್ಯಪ್ ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಏಪ್ರಿಲ್ 4 ರಂದೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು ತಮಿಳುನಾಡಿನಲ್ಲಿ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ದಾವಣಗೆರೆಯ ಮೂವರು ಆರೋಪಿಗಳು ಸೇರಿದಂತೆ ಉಳಿದ ವಂಚಕರಿಗಾಗಿ ಶೋಧ ನಡೆಸಲಾಗುತ್ತಿದೆ.

