HomeLatest Newsಕಾವೇರಿ ನದಿ ನೀರು ಹಂಚಿಕೆ ವಿವಾದ: ಕರ್ನಾಟಕದ ದೀರ್ಘಾವಧಿ ಕಾನೂನು ಹೋರಾಟ, ವಾಸ್ತವಿಕತೆ ಮತ್ತು ಮುಂದಿನ...

ಕಾವೇರಿ ನದಿ ನೀರು ಹಂಚಿಕೆ ವಿವಾದ: ಕರ್ನಾಟಕದ ದೀರ್ಘಾವಧಿ ಕಾನೂನು ಹೋರಾಟ, ವಾಸ್ತವಿಕತೆ ಮತ್ತು ಮುಂದಿನ ದಾರಿ

ಬೆಂಗಳೂರು- ಕರ್ನಾಟಕದ ಜೀವನಾಡಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ರಾಜ್ಯದಲ್ಲಿ ತೀವ್ರ ಆಕ್ರೋಶ ಮತ್ತು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ.

​ದಕ್ಷಿಣ ಭಾರತದ ಜೀವನಾಡಿಯಾದ ಕಾವೇರಿ ನದಿ ನೀರು ಹಂಚಿಕೆ ವಿವಾದವು ಕೇವಲ ಎರಡು ರಾಜ್ಯಗಳ ನಡುವಿನ ನೀರಿನ ಹಕ್ಕಿನ ಪ್ರಶ್ನೆಯಾಗಿ ಉಳಿದಿಲ್ಲ; ಇದು ದಶಕಗಳಿಂದ ಕನ್ನಡಿಗರ ಅನ್ನ-ಆಹಾರ, ರೈತರ ಬದುಕು ಮತ್ತು ಆರ್ಥಿಕತೆಯ ಅಸ್ತಿತ್ವದ ಪ್ರಶ್ನೆಯಾಗಿ ಗೂಡುಬಿಟ್ಟಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡುವ ಆದೇಶಗಳು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ದೀರ್ಘಕಾಲದ ಕಾನೂನು ಸಮರಗಳು ಕರ್ನಾಟಕದ ಪಾಲಿಗೆ ನಿರಂತರ ಅನಿಶ್ಚಿತತೆ ಮತ್ತು ಸಂಕಷ್ಟವನ್ನು ತಂದೊಡ್ಡುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆ ಕೊರತೆ ಹಾಗೂ ಕುಡಿಯುವ ನೀರಿನ ಭೀಕರ ಅಭಾವದ ನಡುವೆಯೂ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ದಶಕಗಳ ಹಿಂದಿನ ಐತಿಹಾಸಿಕ ಅನ್ಯಾಯಗಳ ನೆನಪನ್ನು ಮರುಕಳಿಸುವಂತೆ ಮಾಡಿದೆ.

CWMA ಆದೇಶ ಮತ್ತು ರಾಜ್ಯ ಸರ್ಕಾರದ ನಿಲುವು

​ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಶಿಫಾರಸಿನಂತೆ, ಕರ್ನಾಟಕವು ಪ್ರತಿದಿನ 3,500 ಕ್ಯುಸೆಕ್ ನೀರನ್ನು 15 ದಿನಗಳ ಕಾಲ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ ಹರಿಸಿ ಒಟ್ಟು 4.6 ಟಿಎಂಸಿ ನೀರು ತಲುಪಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನಿದೇರ್ಶನ ನೀಡಿದೆ.

ಜುಲೈ 29 ರಿಂದಲೇ ಈ ಆದೇಶ ಜಾರಿಗೆ ಬಂದಿದ್ದರೂ, ರಾಜ್ಯ ಸರ್ಕಾರವು ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿದ್ದು, ಪರಿಸ್ಥಿತಿಯನ್ನು ಚರ್ಚಿಸಲು ನಾಳೆ ಸರ್ವಪಕ್ಷಗಳ ಸಭೆಯನ್ನು ಕರೆದಿದೆ.

​ಕರ್ನಾಟಕದ ಬಹುತೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನೆಲೆಸಿದ್ದು, ಕುಡಿಯಲು ನೀರಿಲ್ಲದೆ, ಕೃಷಿ ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ನೆರೆ ರಾಜ್ಯಕ್ಕೆ ಬಿಡಬೇಕಾದ ಆದೇಶಗಳು ಕಾವೇರಿ ಕೊಳ್ಳದ ರೈತರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

​ಐತಿಹಾಸಿಕ ಹಿನ್ನೆಲೆ:

ಐತಿಹಾಸಿಕ ಹಿನ್ನೆಲೆ

​ಕಾವೇರಿ ನದಿ ನೀರಿನ ಬಳಕೆ ಮತ್ತು ಹಂಚಿಕೆಯ ತಗಾದೆಗೆ 200 ವರ್ಷಗಳಿಗೂ ಅಧಿಕ ಇತಿಹಾಸವಿದೆ.1804ರಲ್ಲಿ ಮದ್ರಾಸ್ ಸರ್ಕಾರವು ಕಾವೇರಿ ನೀರಿನ ಬಳಕೆ ಕುರಿತು ಆಕ್ಷೇಪ ಎತ್ತಿತ್ತು. ನಂತರ 1892 ಮತ್ತು 1924ರಲ್ಲಿ ಬ್ರಿಟಿಷರ ಪ್ರೆಸಿಡೆನ್ಸಿ ಆಡಳಿತದಡಿ ಮೈಸೂರು ಸಂಸ್ಥಾನದ ಮೇಲೆ ಕರಾಳ ಒಪ್ಪಂದಗಳನ್ನು ಹೇರಲಾಯಿತು.

1924ರ ಒಪ್ಪಂದವು 50 ವರ್ಷಗಳ ಕಾಲ ಜಾರಿಯಲ್ಲಿದ್ದು, ಇದು ಕಾವೇರಿ ನದಿ ನೀರಿನ ಬಳಕೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಮಾತ್ರ ಕಠಿಣ ನಿರ್ಬಂಧಗಳನ್ನು ವಿಧಿಸಿತು. ಆದರೆ ಮದ್ರಾಸ್ ಸರ್ಕಾರಕ್ಕೆ ಯಾವುದೇ ಮಿತಿಗಳಿರಲಿಲ್ಲ. ಮುಂಗಾರಿನ ಸಿಂಹಪಾಲು ಮದ್ರಾಸಿಗೆ ದಕ್ಕುವಂತೆ ಕೃಷಿ ಸಂಗ್ರಹಣಾ ಸೂತ್ರಗಳನ್ನು ರೂಪಿಸಲಾಗಿತ್ತು.

ಕರ್ನಾಟಕದ ಕೆ.ಆರ್.ಎಸ್. ಅಣೆಕಟ್ಟೆಯ ಸಾಮರ್ಥ್ಯ 43.56 ಟಿಎಂಸಿ ಅಡಿ ಇದ್ದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದ ಸಾಮರ್ಥ್ಯ 93.5 ಟಿಎಂಸಿ ಅಡಿಯಷ್ಟಿದ್ದು, ಕಾಲಕ್ರಮೇಣ ತಮಿಳುನಾಡಿನಲ್ಲಿ ಹೆಚ್ಚಿನ ಜಲಾಶಯಗಳು ನಿರ್ಮಾಣಗೊಂಡವು.

​ಕರ್ನಾಟಕವು 1970ರಲ್ಲಿ ಮೊದಲ ಬಾರಿಗೆ ಈ ಒಪ್ಪಂದಗಳ ಮುಂದುವರಿಕೆಯನ್ನು ಪ್ರಶ್ನಿಸಿತು. 1990ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರವು ಕಾವೇರಿ ಜಲ ವಿವಾದ ನ್ಯಾಯಾಧಿಕರಣವನ್ನು (Tribunal) ರಚಿಸಿತು.

ಪ್ರಮುಖ ರಾಜಕೀಯ ಘಟನೆಗಳು

​ಬಂಗಾರಪ್ಪ ಕಾಲದ ಸುಗ್ರೀವಾಜ್ಞೆ: 1991ರಲ್ಲಿ ನ್ಯಾಯಾಧಿಕರಣವು ಮಧ್ಯಂತರ ಆದೇಶ ನೀಡಿ, ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ನೀರು ಹರಿಸಲು ಸೂಚಿಸಿತು.

ಇದನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದರು.

​ಎಸ್.ಎಂ. ಕೃಷ್ಣ ಪಾದಯಾತ್ರೆ: 2002ರಲ್ಲಿ ತೀವ್ರ ಬರಗಾಲವಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಬೆಂಗಳೂರಿನಿಂದ ಮಂಡ್ಯದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ನ್ಯಾಯಾಂಗ ನಿಂದನೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸಿ ನೀರು ಹರಿಸಬೇಕಾಯಿತು.

ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಮತ್ತು ವಾಸ್ತವ

​2007ರ ಅಂತಿಮ ತೀರ್ಪನ್ನು ಪರಿಷ್ಕರಿಸಿ 2018ರಲ್ಲಿ ಸುಪ್ರೀಂ ಕೋರ್ಟ್ ನೀರು ಹಂಚಿಕೆಯನ್ನು ಈ ಕೆಳಗಿನಂತೆ ಅಂತಿಮಗೊಳಿಸಿತು:

​ತಮಿಳುನಾಡು: 177.25 ಟಿಎಂಸಿ ಅಡಿ

​ಕರ್ನಾಟಕ: 284.75 ಟಿಎಂಸಿ ಅಡಿ

​ಕೇರಳ: 30 ಟಿಎಂಸಿ ಅಡಿ

​ಪುದುಚೆರಿ: 7 ಟಿಎಂಸಿ ಅಡಿ

​ಆದರೆ, ವಾಸ್ತವಿಕ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕವು ಸುಪ್ರೀಂ ಕೋರ್ಟ್ ಆದೇಶಿಸಿದ್ದಕ್ಕಿಂತಲೂ ಸುಮಾರು 970 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಅಧಿಕವಾಗಿಯೇ ಹರಿಸಿದೆ.

ಮಳೆಯಿಲ್ಲದೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಾಗ ನದಿ ನೀರಿನ ಹಂಚಿಕೆಯನ್ನು ಮರುಹೊಂದಿಸಲು ಯಾವುದೇ ವೈಜ್ಞಾನಿಕ “ಸಂಕಷ್ಟ ಸೂತ್ರ” (Distress Formula) ಇಲ್ಲದಿರುವುದೇ ಇಂದಿನ ಪ್ರಮುಖ ಸಮಸ್ಯೆಯಾಗಿದೆ.

ರಾಜಕೀಯ ಇಚ್ಛಾಶಕ್ತಿ ಮತ್ತು ಮುಂದಿನ ದಾರಿ

​ಕಾವೇರಿ ಜಲವಿವಾದ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗುವುದು ಭಾವನೆಗಳು, ಆಕ್ರೋಶ, ಹೋರಾಟ ಮತ್ತು ಕಾನೂನಿನ ಸಮರ. ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳೂ ಸಂಕಷ್ಟದ ಸಮಯದಲ್ಲಿ ಮೊದಲು “ನೀರು ಬಿಡುವುದಿಲ್ಲ” ಎಂದು ಪ್ರತಿರೋಧ ವ್ಯಕ್ತಪಡಿಸಿದರೂ, ಅಂತಿಮವಾಗಿ ಕಾನೂನಿನ ಕಟ್ಟುಪಾಡುಗಳಿಗೆ ಮಣಿದು ರಾತ್ರೋರಾತ್ರಿ ನೀರು ಹರಿಸುತ್ತ ಬಂದಿರುವುದು ಇತಿಹಾಸದ ಕಹಿ ಸತ್ಯ.

​ಪ್ರಸ್ತುತ ಕರೆಯಲಾಗಿರುವ ಸರ್ವಪಕ್ಷ ಸಭೆಯು ಕೇವಲ ರಾಜಕೀಯ ಮೇಲಾಟವಾಗದೆ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಂಕಷ್ಟ ಸೂತ್ರವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಯಾವ ದಿaಸುತ್ತೆ ಎಂಬುದು ಕಾವೇರಿ ಕೊಳ್ಳದ ರೈತರ ಕಾತರದ ಪ್ರಶ್ನೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular