ಕಳೆದ ಕೆಲವು ದಿನಗಳಲ್ಲಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯು ಜನ ಜೀವನವನ್ನೇ ಸಂಪೂರ್ಣ ಅಲ್ಲೋಲ ಕಲ್ಲೋಲ ಮಾಡಿತ್ತು. ಪ್ರವಾಹದ ನಂತರದ ಪರಿಸ್ಥಿತಿಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಕೋಟಾದಲ್ಲಿ ಮೊಸಳೆಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಸದ್ಯ ಇಂಟರ್ನೆಟ್ನಲ್ಲಿ ಸದ್ದು ಮಾಡ್ತಿದೆ. ಗುಜರಾತ್ನ ಗಿರ್ನ ತಲಾಲಾ ವಸತಿ ಪ್ರದೇಶದಲ್ಲಿಯೂ ಸಹ ಇದೇ ಮಾದರಿಯ ದೃಶ್ಯಾವಳಿಗಳು ಕಂಡು ಬಂದಿದೆ.
ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಜುಲೈ 19ರಂದು ಟ್ವಿಟರ್ನಲ್ಲಿ ಈ ಎರಡೂ ಪ್ರದೇಶಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಕೋಟಾದ ತಲವಾಂಡಿ ಪ್ರದೇಶದ ವಾಣಿಜ್ಯ ಕಾಲೇಜು ಬಳಿಯಲ್ಲಿ ಮೂರವರೆ ಅಡಿ ಮೊಸಳೆಯು ಮುಖ್ಯ ರಸ್ತೆಯಲ್ಲಿ ಹಾದು ಹೋಗಿದೆ.
ಕೋಟಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೈರಾಮ್ ಪಾಂಡೆ ಮಂಗಳವಾರ ರಾತ್ರಿ ಮೊಸಳೆ ಬಗ್ಗೆ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮೊಸಳೆಯು ಚರಂಡಿಯಲ್ಲಿ ಕಣ್ಮರೆಯಾಗಿದೆ. ಚಂಬಲ್ ನದಿ ದಂಡೆ ಮೇಲಿರುವ ಈ ನಗರವು ಘಾರಿಯಲ್ ಅಭಯಾರಣ್ಯವನ್ನು ಹೊಂದಿದೆ. ಹೀಗಾಗಿ ಮೊಸಳೆಗಳು ಆಗಾಗ ವಸತಿ ಪ್ರದೇಶಗಳಿಗೆ ಎಂಟ್ರಿ ಕೊಡುತ್ತಿರುತ್ತವೆ.
ವರದಿಗಳ ಪ್ರಕಾರ ಸಜಿದ್ರಾ ಪ್ರದೇಶದಲ್ಲಿ ಪ್ರವಾಹದಿಂದಾಗಿ ಮೊಸಳೆಯು ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ. ಕೋಟಾ ನದಿ ದಂಡೆಯ ಮೇಲಿರುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ ಎಂದು ಸ್ಥಳೀಯರು ಹೇಳಿದ್ದಾರೆ.
https://twitter.com/i/status/1681642651064606721
https://twitter.com/i/status/1681636070075801601