ರಾಜ್ಯದಲ್ಲಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಬ್ಬರದ ನಡುವೆಯೇ ಹಿಂದಿ ಹೇರಿಕೆ ಬೇಡ ಎಂದು ದೊಡ್ಡದಾಗಿ ದನಿ ಎತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕ ನೀಡುವುದನ್ನು ತೆಗೆದುಹಾಕಿ ಕೇವಲ ಗ್ರೇಡ್ ನೀಡಲು ತೀರ್ಮಾನಿಸಿತ್ತು.
ಇದರಿಂದ ಹಿಂದಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿತ್ತು. ಅತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆಗೆ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿ ಹಿಂದಿ ಬೇಕು ಎನ್ನತೊಡಗಿದ್ದಾರೆ. ಕನ್ನಡಿಗರು ಮಾತ್ರ ಹಿಂದಿ ಬೇಡ ದ್ವಿಭಾಷಾ ನೀತಿ ಸರಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ನಿಲುವನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರೇ ನಿಮ್ಮ ಹಿಂದಿ ಹೇರಿಕೆ ನಿಲ್ಲಿಸಿ ಎಂದು ಸಾಲು ಸಾಲು ಟ್ವೀಟ್ ಮಾಡತೊಡಗಿದ್ದಾರೆ. ಹೀಗೆ ರಾಜ್ಯದಲ್ಲಿ ಹಿಂದಿ ತೊಲಗಲಿ ಎಂದು ಕನ್ನಡ ಜನರು ರೊಚ್ಚಿಗೆದ್ದಿರುವಾಗಲೇ ಭಾರತದ ನಂಬರ್ ಒನ್ ಕ್ರಿಕೆಟ್ ಅಪ್ಲಿಕೇಶನ್ ಕ್ರಿಕ್‌ಬಜ್ ಕನ್ನಡ ಅವತರಣಿಕೆಯ ಜಾಹೀರಾತೊಂದನ್ನು ಹಂಚಿಕೊಂಡು ಕನ್ನಡದಲ್ಲಿಯೇ ಕ್ಯಾಪ್ಷನ್ ಹಾಕಿದ್ದಾರೆ. ಜಾಹೀರಾತು ಹಿಂದಿಯಲ್ಲಿ ಶೂಟ್ ಆಗಿದ್ದರೂ ಸಹ ಕನ್ನಡದಲ್ಲಿ ಪೋಸ್ಟ್ ಮಾಡಿರುವುದು ವಿಶೇಷವೆನಿಸಿಕೊಂಡಿದೆ.
ಇದನ್ನು ಶೇರ್ ಮಾಡಿರುವ ಕನ್ನಡಿಗರು ಇದು ಸಾಧ್ಯವಾಗಿದ್ದು ಕನ್ನಡಪರ ಹೋರಾಟ ನಡೆಸಿ ಹಿಂದಿ ಹೇರಿಕೆ ವಿರೋಧಿಸಿದ ಕನ್ನಡಿಗರಿಂದ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

