ನವದೆಹಲಿ : ಪಂಜಾಬ್ನ ಮೊಹಾಲಿಯಲ್ಲಿ ಮಾಜಿ ಪ್ರಿಯಕರನೊಬ್ಬ ತನ್ನ ಮಾಜಿ ಗೆಳತಿಯನ್ನು ಕಚೇರಿಯಲ್ಲೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಸಹೋದ್ಯೋಗಿಗಳ ಕಣ್ಣೆದುರೇ ಈ ಘಾತುಕ ಕೃತ್ಯ ನಡೆದಿದೆ. ಇತ್ತೀಚೆಗೆ ಸಂಬಂಧದ ವಿಷಯದಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಕಚೇರಿಗೆ ನುಗ್ಗಿ ಈ ಹತ್ಯೆಯನ್ನು ನಡೆಸಲಾಗಿದೆ. ಆರೋಪಿಯನ್ನು ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಎಂದು ಗುರುತಿಸಲಾಗಿದೆ. ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದ ನಂತರ, ಆರೋಪಿಯು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾದ ಕೃತ್ಯ: ಗುರುವಾರ ರಾತ್ರಿ 7:40ರ ಸುಮಾರಿಗೆ ಆರೋಪಿಯು ಕಚೇರಿಯೊಳಗೆ ನುಗ್ಗಿದ್ದಾನೆ. ತನ್ನ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಮಾಜಿ ಗೆಳತಿ ಡಿಂಪಲ್ ಬಳಿಗೆ ತೆರಳಿ, ಆಕೆಯನ್ನು ಹಿಂದಿನಿಂದ ಚಾಕುವಿನಿಂದ ಇರಿದಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಆಕೆಯ ಕೂದಲನ್ನು ಹಿಡಿದು ಎಳೆದು ಬರ್ಬರವಾಗಿ ಇರಿದಿದ್ದಾನೆ. ಅಲ್ಲಿದ್ದ ಸಹೋದ್ಯೋಗಿಗಳು ತಡೆಯಲು ಪ್ರಯತ್ನಿಸಿದರೂ ಆರೋಪಿ ಬಿಡಲಿಲ್ಲ. ಡಿಂಪಲ್ ಅವರನ್ನು ಸುಮಾರು 20 ಬಾರಿ ಇರಿದಿದ್ದಾನೆ.
ಆತ್ಮಹತ್ಯೆಗೆ ಯತ್ನ: ಪ್ರೇಯಸಿಯನ್ನು ಕೊಂದ ನಂತರ, ಆರೋಪಿಯು ಅದೇ ಸ್ಥಳದಲ್ಲಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಾಕುವಿನಿಂದ ತನ್ನ ಕುತ್ತಿಗೆಯನ್ನು ಸುಮಾರು 30 ಬಾರಿ ಇರಿದುಕೊಂಡಿದ್ದಾನೆ. ಡಿಂಪಲ್ ಮೂಲತಃ ಪಟಿಯಾಲದವರು. ಇವರಿಬ್ಬರ ನಡುವೆ ಮೂರು ವರ್ಷಗಳ ಕಾಲ ಸಂಬಂಧವಿತ್ತು, ಆದರೆ ಇತ್ತೀಚೆಗೆ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಡಿಂಪಲ್ ಜೊತೆ ಮತ್ತೆ ಸಂಬಂಧ ಮುಂದುವರಿಸಲು ಹ್ಯಾರಿ ಪ್ರಯತ್ನಿಸಿದ್ದನು, ಆದರೆ ಆತ ವಿಫಲನಾಗಿದ್ದನು. ಆ ಹತಾಶೆಯಲ್ಲಿಯೇ ಈ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದುಬಂದಿದೆ.

