BIG NEWS: ಸಂವಿಧಾನದ ಬಗ್ಗೆ ಅಸಹನೆ ಬಿಟ್ಟು ಆಶಯಕ್ಕನುಸಾರ ನಡೆಯಿರಿ: ಪೇಜಾವರ ಶ್ರೀಗಳಿಗೆ ಸಚಿವ ಮಹಾದೇವಪ್ಪ ಬಹಿರಂಗ ಪತ್ರ

ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ಘಟಕವು ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಪೇಜಾವರ ಶ್ರೀಗಳು “ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ” 75 ವರ್ಷಗಳಾದರೂ ಕೂಡಾ ನಾವು ಸ್ವಾತಂತ್ರ್ಯ ಹೊಂದಿದ್ದೇವೆಯೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದು, ಸನಾತನ ಮಂಡಳಿ ರಚಿಸಲು ಕರೆ ನೀಡಿದ್ದಾರೆ.

ಈ ಕುರಿತಾಗಿ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ ಬಹಿರಂಗ ಪತ್ರ ಬರೆದಿದ್ದು, ಸಮಾನತೆಯ ಸಂಜೀವಿನಿಯಾದ ಬಾಬಾ ಸಾಹೇಬರ ಸಂವಿಧಾನದ ಕುರಿತಂತೆ ಅಸಹನೆ ತೋರುವುದನ್ನು ಬಿಟ್ಟು ಸಂವಿಧಾನ ಹೇಳಿದ ಆಶಯಕ್ಕನುಸಾರವಾಗಿ ನಡೆಯಿರಿ ಎಂದು ವಿನಂತಿಸಿದ್ದಾರೆ.

“ಶ್ರೀಗಳೇ,

ಜಾತಿ ಮತ್ತು ಧರ್ಮದ ಶ್ರೇಷ್ಠತೆಯ ಕಾರಣಕ್ಕೆ ಅಸಮಾನತೆ, ಅವಮಾನ ಮತ್ತು ದೌರ್ಜನ್ಯದ ಕೂಪವಾಗಿದ್ದ ಸನಾತನ ಧರ್ಮದ ಕೆಟ್ಟ ನಡವಳಿಕೆಗಳನ್ನು ದೂರ ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುವ ಮಹೋನ್ನತ ಉದ್ದೇಶದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ.

ಭಾರತದ ಪ್ರಜೆಗಳಾದ ನಾವು ಏನು ಮಾಡಬೇಕು ಎಂಬ ಕರ್ತವ್ಯ ಪ್ರಜ್ಞೆಯ ಜೊತೆಗೆ ನಮ್ಮ ಹಕ್ಕುಗಳು ಯಾವುವು ಎಂಬುದನ್ನೂ ಸಹ ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಹೀಗಾಗಿ ಇಲ್ಲಿ ನೀವು ಹೇಳುವ ಧರ್ಮ ಮತ್ತಿತರೆ ಆಚರಣೆಗಳು ಸಂವಿಧಾನದ ಪರಿಮಿತಿಯಲ್ಲೇ ಬರುವ ಕಾರಣ ಇಲ್ಲಿ ಯಾರೂ ಕೂಡಾ Extra constitutional authority ಅಲ್ಲ ಎಂಬುದನ್ನು ಮೊದಲು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಲು ನಾನು ಬಯಸುತ್ತೇನೆ.

ಧರ್ಮಕ್ಕೂ ರಾಜಕೀಯಕ್ಕೂ ಸಂಬಂಧ ಬೆರೆಸಿ ಧರ್ಮವನ್ನು ರಾಜಕೀಯ ಪಕ್ಷಗಳಿಗೆ ಸೀಮಿತಗೊಳಿಸುವ ಕೆಲಸ ಮಾಡುವ ಬದಲು, ವಿಶ್ವಗುರು ಬಸವಣ್ಣ, ವಿಶ್ವ ಚೇತನ ಸ್ವಾಮಿ ವಿವೇಕಾನಂದರು ಧರ್ಮದ ಬಗ್ಗೆ ಆಡಿರುವ ಮಾತುಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜಕ್ಕೆ ತಿಳಿಸುವುದು ನಿಜದ ಧರ್ಮ ಸೇವೆ ಎಂದು ನಾನು ಹೇಳಲು ಬಯಸುವೆ.

ಸನಾತನ ಧರ್ಮ ಎಷ್ಟರ ಮಟ್ಟಿಗೆ ಪರಿಶಿಷ್ಟರ ಬದುಕನ್ನು ಹೀಯಾಳಿಸಿ ಅವಮಾನಿಸಿದೆ ಎನ್ನುವುದಕ್ಕೆ ಪರಿಶಿಷ್ಟರ ಅನುಭವಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ.

ಹೀಗಾಗಿ ಸಮಾನತೆಯ ಸಂಜೀವಿನಿಯಾದ ಬಾಬಾ ಸಾಹೇಬರ ಸಂವಿಧಾನದ ಕುರಿತಂತೆ ಅಸಹನೆ ತೋರುವುದನ್ನು ಬಿಟ್ಟು ಸಂವಿಧಾನ ಹೇಳಿದ ಆಶಯಕ್ಕನುಸಾರವಾಗಿ ನಡೆಯಿರಿ ಎಂದು ವಿನಂತಿಸುವೆ” ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read