ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯ ವೇಳೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಬ್ಯಾನರ್ ಗಲಾಟೆಯ ವೇಳೆ ನಡೆದಿದೆ ಎನ್ನಲಾದ ವಿಡಿಯೋವನ್ನು ಬಿಡುಗಡೆ ಮಾಡಿದ ಅವರು, ಗಲಾಟೆ ನಡೆಯುವ ಮೊದಲು ಶ್ರೀರಾಮುಲು ಸ್ಥಳದಿಂದ ತೆರಳುವಂತೆ ಸತೀಶ್ ರೆಡ್ಡಿಗೆ ಸೂಚಿಸಿದ್ದರು. ಶ್ರೀರಾಮುಲು ಅವರ ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸತೀಶ್ ರೆಡ್ಡಿ, ಶ್ರೀರಾಮುಲು ಅವರನ್ನು ಹೊಡೆಯಿರಿ, ಮುಗಿಸಿರಿ, ಸಾಯಿಸಿರಿ ಎಂದು ಪ್ರಚೋದನೆ ನೀಡಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಗಲಾಟೆ ಆಕಸ್ಮಿಕವಾಗಿ ನಡೆದಿಲ್ಲ. ವ್ಯವಸ್ಥಿತವಾಗಿ ನಡೆದಿದೆ. ಪೊಲೀಸರ ಸಮ್ಮುಖದಲ್ಲಿಯೇ ಬ್ಯಾನರ್ ತೆಗೆಸಲಾಗಿತ್ತು. ರಾತ್ರಿ ವೇಳೆ ಮತ್ತೆ ಗನ್ ಮ್ಯಾನ್ ಕರೆದುಕೊಂಡು ಬ್ಯಾನರ್ ಹಾಕಲು ಬಂದಿದ್ದರ ಉದ್ದೇಶವೇನು? ಶ್ರೀರಾಮುಲು ಮೇಲೆ ದಾಳಿ ಮಾಡಲು ಅವರು ಮೊದಲೇ ಪ್ಲಾನ್ ಮಾಡಿಕೊಂಡಿದ್ದರು. ಬ್ಯಾನರ್ ಹಾಕುವುದು ಒಂದು ನೆಪವಾಗಿತ್ತು ಅಷ್ಟೇ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಸರ್ಕಾರದ ನಡೆಯನ್ನು ಖಂಡಿಸಿದ ಜನಾರ್ದನ ರೆಡ್ಡಿ, ಘಟನೆ ನಡೆದು ಹತ್ತು ದಿನಗಳಾದರೂ ಒಬ್ಬ ಆರೋಪಿಯನ್ನು ಬಂಧಿಸಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

