HomeLatest Newsವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಮತ ಹಾಕಿ ಉಲ್ಟಾ ಹೊಡೆದ ಬಿಜೆಪಿ, ಜೆಡಿಎಸ್ ಶಾಸಕರು; 5 ಸ್ಥಾನ...

ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಮತ ಹಾಕಿ ಉಲ್ಟಾ ಹೊಡೆದ ಬಿಜೆಪಿ, ಜೆಡಿಎಸ್ ಶಾಸಕರು; 5 ಸ್ಥಾನ ಗೆದ್ದ ಕಾಂಗ್ರೆಸ್!

ಬೆಂಗಳೂರು: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಅಡ್ಡ ಮತದಾನವಾಗಿದ್ದು ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದೆ.

ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆಯಾದರೂ, ಶಾಸಕರು ಅಡ್ಡ ಮತದಾನ ನಡೆಸಿರುವುದು ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಫಲಿತಾಂಶವು ರಾಜ್ಯ ರಾಜಕಾರಣದ ಸಮೀಕರಣಗಳನ್ನೇ ಬದಲಿಸುವ ಮುನ್ಸೂಚನೆಯನ್ನು ನೀಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪಾಲಿಗೆ ಈ ಚುನಾವಣೆ ಅನಿರೀಕ್ಷಿತ ಹಿನ್ನಡೆಯನ್ನು ತಂದೊಡ್ಡಿದ್ದು, ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆ ಸಂಪೂರ್ಣ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ನಡೆಸಿರುವುದು ಭವಿಷ್ಯದಲ್ಲಿ ಎರಡು ಪಕ್ಷಗಳಿಗೆ ಎಚ್ಚರಿಕೆ ಹೆಜ್ಜೆ ಇಡಬೇಕೆಂಬ ಸಂದೇಶವನ್ನು ರವಾನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಅತಿ ಹೆಚ್ಚು ಅಂದರೆ 32 ಮತಗಳನ್ನು ಪಡೆದು ಮೊದಲ ಬಾರಿಗೆ ವಿಧಾನ ಪರಿಷತ್ತನ್ನು ಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ಕೊನೆಯ ಹಂತದವರೆಗೆ ತೀವ್ರ ಕುತೂಹಲ ಕೆರಳಿಸಿದ್ದ ವಿನಯ್ ಕಾರ್ತಿಕ್ ಸೇರಿದಂತೆ ಐದೂ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ. ವಿಶೇಷವಾಗಿ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜತಾಂತ್ರಿಕ ನಡೆ ಮತ್ತು ತಂತ್ರಗಾರಿಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಮೈತ್ರಿಕೂಟಕ್ಕೆ ಭಾರಿ ಮುಖಭಂಗ

​ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಜಯ ಸಾಧಿಸಬೇಕಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ, ತಮ್ಮದೇ ಪಕ್ಷದ ಶಾಸಕರ ಅಡ್ಡಮತದಾನ ದೊಡ್ಡ ಹೊಡೆತ ನೀಡಿದೆ. ನಿಗದಿತ ಮತಗಳನ್ನು ಪಡೆಯಲು ವಿಫಲವಾದ ಮೈತ್ರಿಕೂಟ, ಪಕ್ಷದ ಒಳಗಿನ ಭಿನ್ನಮತವನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಅಡ್ಡಮತದಾನವು ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಎರಡೂ ಪಕ್ಷಗಳ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

​ಫಲಿಸಿದ ಕಾಂಗ್ರೆಸ್ ತಂತ್ರಗಾರಿಕೆ

ಆಪರೇಷನ್ ಹಸ್ತದ ಮೂಲಕ ಮೈತ್ರಿಕೂಟದ ಅತೃಪ್ತ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಂಖ್ಯಾಬಲ ಕಡಿಮೆ ಇದ್ದರೂ, ವೈಯಕ್ತಿಕ ಸಂಪರ್ಕ ಮತ್ತು ನಿಖರವಾದ ರಾಜಕೀಯ ರಣತಂತ್ರಗಳನ್ನು ಹೆಣೆಯುವ ಮೂಲಕ ಕಾಂಗ್ರೆಸ್ ನಾಯಕತ್ವ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಗೆಲುವು ಸಾಧಿಸಿದೆ. ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಚಾಣಾಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

​ಮೈತ್ರಿಕೂಟದಲ್ಲಿ ಕೋಲಾಹಲ

​ಈ ಸೋಲಿನ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಒಳಗೆ ಆಂತರಿಕ ಸಮರ ಭುಗಿಲೆದ್ದಿದೆ. ಸೋಲಿಗೆ ಕಾರಣರಾದವರು ಯಾರು? ಅಡ್ಡಮತದಾನ ಮಾಡಿದವರಾರು? ಎಂಬ ವಿಚಾರವಾಗಿ ನಾಯಕರ ನಡುವೆಯೇ ವಾಕ್ಸಮರ ಆರಂಭವಾಗಿದೆ. ಮೈತ್ರಿ ಧರ್ಮ ಪಾಲನೆಯಲ್ಲಿನ ಲೋಪ ಮತ್ತು ಪಕ್ಷದ ಶಾಸಕರ ನಿಯಂತ್ರಣದಲ್ಲಿ ವಿಫಲವಾದ ಬಗ್ಗೆ ಹಿರಿಯ ನಾಯಕರ ವಿರುದ್ಧ ಕಿಡಿಕಾರಲಾಗುತ್ತಿದೆ. ಮೈತ್ರಿಯ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಭಾವನೆ ಕಾರ್ಯಕರ್ತರಲ್ಲಿ ಮನೆ ಮಾಡಿದ್ದು, ನಾಯಕತ್ವದ ಮೇಲೆ ಒತ್ತಡ ಹೆಚ್ಚಾಗಿದೆ.

​ಎಚ್ಚರಿಕೆ ಗಂಟೆಯಾದ ಫಲಿತಾಂಶ

​ಈ ಚುನಾವಣೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಕೇವಲ ಒಂದು ಚುನಾವಣೆ ಎನ್ನುವುದಕ್ಕಿಂತ ಹೆಚ್ಚಾಗಿ, ಮೈತ್ರಿಕೂಟದ ಅಸ್ತಿತ್ವಕ್ಕೆ ಇದು ಸವಾಲಾಗಿ ಪರಿಣಮಿಸಿದೆ. ಪಕ್ಷದ ಶಾಸಕರ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ಗೆ, ಮುಂದಿನ ದಿನಗಳಲ್ಲಿ ತಮ್ಮ ತಳಮಟ್ಟದ ಸಂಘಟನೆಯನ್ನು ಬಲಪಡಿಸಿಕೊಳ್ಳದಿದ್ದರೆ ಭವಿಷ್ಯದ ಚುನಾವಣೆಗಳಲ್ಲಿ ಇನ್ನಷ್ಟು ಹಿನ್ನಡೆಯಾಗುವ ಸಾಧ್ಯತೆಯನ್ನು ಈ ಫಲಿತಾಂಶ ಎತ್ತಿ ತೋರಿಸಿದೆ..

ವರ್ಕೌಟ್ ಆದ ಡಿಕೆಶಿ ಮಾಸ್ಟರ್ ಪ್ಲ್ಯಾನ್!

ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣೆಗೂ ಮುನ್ನವೇ ಚಾಣಾಕ್ಷ ನಡೆ ಇಟ್ಟಿದ್ದರು. ಯಾವುದೇ ಒಂದು ಮತವೂ ಕೈತಪ್ಪದಂತೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರನ್ನು ಬಿಡದಿಯ ರೆಸಾರ್ಟ್‌ನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಅಷ್ಟೇ ಅಲ್ಲದೆ, ಕಣದಲ್ಲಿದ್ದ ಐದೂ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಶಾಸಕರನ್ನು ಐದು ಪ್ರತ್ಯೇಕ ತಂಡಗಳಾಗಿ ವಿಂಗಡಿಸಿ ಜವಾಬ್ದಾರಿ ಹಂಚಲಾಗಿತ್ತು. ಮತದಾನದ ದಿನವಾದ ಇಂದು ಕೂಡ ಈ ಐದು ತಂಡಗಳ ಶಾಸಕರನ್ನು ಪ್ರತ್ಯೇಕ ಐದು ಬಸ್‌ಗಳಲ್ಲಿ ಶಿಸ್ತುಬದ್ಧವಾಗಿ ವಿಧಾನಸೌಧಕ್ಕೆ ಕರೆತಂದು ಮತ ಚಲಾಯಿಸುವಂತೆ ನೋಡಿಕೊಳ್ಳಲಾಗಿತ್ತು. ವಿರೋಧ ಪಕ್ಷಗಳು ಅಡ್ಡಮತದಾನದ ಲೆಕ್ಕಾಚಾರದಲ್ಲಿದ್ದರೂ, ತಮ್ಮ ಶಾಸಕರ ಕೋಟೆಯನ್ನು ಭದ್ರವಾಗಿ ಕಾಯ್ದುಕೊಂಡ ಡಿ.ಕೆ. ಶಿವಕುಮಾರ್ ಅವರ ಈ ಮಾಸ್ಟರ್ ಪ್ಲ್ಯಾನ್ ನೂರಕ್ಕೆ ನೂರರಷ್ಟು ವರ್ಕೌಟ್ ಆಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸದ್ಯ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ. ವಿಧಾನ ಪರಿಷತ್‌ನಲ್ಲಿ ಜೂನ್ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಮತದಾನ ನಡೆದಿತ್ತು. ಒಟ್ಟು 222 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದು, ಒಂದು ಮತ ಅಸಿಂಧುಗೊಂಡಿದೆ. ಹೀಗಾಗಿ 221 ಮತಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ. ಈ ಫಲಿತಾಂಶದೊಂದಿಗೆ ಡಿ.ಕೆ. ಶಿವಕುಮಾರ್ ಅವರ ಪ್ರಭಾವ ಮತ್ತು ಸಂಘಟನಾ ಸಾಮರ್ಥ್ಯ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಇದು ಯಶಸ್ಸು ತಂದಿದೆ.

ಚಲಾವಣೆಯಾದ ಮತಗಳು-222

ಎಣಿಕೆಯಾದ ಮತಗಳು-221

ಅಭ್ಯರ್ಥಿಗಳ ವಿವರ

ಕಾಂಗ್ರೆಸ್ ಅಭ್ಯರ್ಥಿಗಳು

ವಿನಯ್ ಕಾರ್ತಿಕ್- 32

ಬಿಕೆ ಹರಿಪ್ರಸಾದ್- 30

ತಿಪ್ಪಣ್ಣಪ್ಪ ಕನಕನೂರು -30

ಮಳವಳ್ಳಿ ಶಿವಣ್ಣ- 30

ಟಿವಿ ಮೋಹನ್- 29

ಬಿಜೆಪಿ ಅಭ್ಯರ್ಥಿಗಳು

ರಘು ಕೌಟಿಲ್ಯ- 29

ಲಿಂಗರಾಜ್ ಪಾಟೀಲ್- 27

ಜೆಡಿಎಸ್ ಅಭ್ಯರ್ಥಿ

ಗೋವಿಂದರಾಜು -14

ಅಸಿಂಧು -1 ಮತ

ಮತಮೌಲ್ಯ- 27.63

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular