ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆಗಳು ಕೇಳಿಬರುತ್ತಿವೆ. ಈ ನಡುವೆ ಸಚಿವಾಕಾಂಕ್ಷಿಗಳಾಗಿರುವ ಹಲವು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದು, ಸಚಿವ ಸ್ಥಾನಕ್ಕಾಗಿ ಮನವಿ ಮಾಡಲು ನಿರ್ಧರಿಸಿದಾರೆ.
ಕಾಂಗ್ರೆಸ್ ನ 20 ಶಾಸಕರು ನಾಳೆ ಭಾನುವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಯಾವುದೇ ನಿರ್ದಿಷ್ಟ ನಾಯಕತ್ವ ಹೆಸರಿನಲ್ಲಲ್ಲದೆ, ಮೂರು, ನಾಲ್ಕು, ಐದು ಬಾರಿ ಶಾಸಕರಾಗಿರುವ ಅನುಭವಿಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಶಾಸಕರ ದೆಹಲಿ ಪ್ರವಾಸದ ಬಗ್ಗೆ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟದ ಅವಧಿ ಮೂರು ವರ್ಷಗಳನ್ನು ಪೂರೈಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ರಾಜಕೀಯ ಏರುಪೇರುಗಳನ್ನು ಗಮನದಲ್ಲಿಟ್ಟುಕೊಂಡು ಇತರರಿಗೂ ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಮನವಿಯನ್ನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಪುನರಚನೆಗೆ ರಾಜಕೀಯ ಲೆಕ್ಕಾಚಾರಗಳು ಪ್ರಮುಖ ಕಾರಣವಾಗಿದ್ದು, 2028ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು ಮುಖ್ಯ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ವರಿಷ್ಠರ ನಿರ್ಧಾರವೇ ಅಂತಿಮವಾಗಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಈ ಭೇಟಿಯ ವಿಷಯವನ್ನು ತರಲಾಗಿದ್ದು, ಅವರು ಮುಕ್ತ ಮನಸ್ಸಿನಿಂದ ಸಮ್ಮತಿಸಿದ್ದಾರೆ ಎಂದು ಜಯಚಂದ್ರ ತಿಳಿಸಿದ್ದಾರೆ.

