25 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಫ್ರೀ ವಿದ್ಯುತ್, OPS ಮರು ಜಾರಿ, ಮಹಿಳೆಯರಿಗೆ ಆರ್ಥಿಕ ನೆರವು: ಹರಿಯಾಣ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ಉಚಿತ ವಿದ್ಯುತ್, ಉಚಿತ ವೈದ್ಯಕೀಯ ಚಿಕಿತ್ಸೆ, ಮಹಿಳೆಯರಿಗೆ ಆರ್ಥಿಕ ನೆರವು, ಎಂಎಸ್‌ಪಿ ಖಾತರಿಯಂತಹ ಭರವಸೆಗಳನ್ನು ಒಳಗೊಂಡಿದೆ.

ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉದಯ್ ಭಾನ್ ಉಪಸ್ಥಿತರಿದ್ದರು.

ಹರಿಯಾಣದ ಪ್ರತಿ ಕುಟುಂಬಕ್ಕೆ 300 ಯೂನಿಟ್ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಕಾಂಗ್ರೆಸ್ ಪಕ್ಷ ವಾಗ್ದಾನ ಮಾಡಿದೆ.

ಮಧ್ಯಪ್ರದೇಶದ ‘ಲಾಡ್ಲಿ ಬೆಹೆನ್ ಯೋಜನೆ’ ಮತ್ತು ಮಹಾರಾಷ್ಟ್ರದ ‘ಲಡ್ಕಿ ಬೆಹೆನ್ ಯೋಜನೆ’ಯ ಮಾರ್ಗಗಳನ್ನು ಅನುಸರಿಸಿ, ರಾಜ್ಯದಲ್ಲಿ 18-60 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೀಡಲು ಕಾಂಗ್ರೆಸ್ ವಾಗ್ದಾನ ಮಾಡಿದೆ.

ಗ್ಯಾಸ್ ಸಿಲಿಂಡರ್‌ಗೆ 500 ರೂ. ನೀಡುವ ಭರವಸೆಯೂ ಪ್ರಣಾಳಿಕೆಯಲ್ಲಿ ಇದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಮತ್ತು ಹಾನಿಗೊಳಗಾದ ಬೆಳೆಗಳಿಗೆ ತಕ್ಷಣದ ಪರಿಹಾರಕ್ಕೆ ಕಾನೂನು ಖಾತರಿ ನೀಡುವುದಾಗಿ ತಿಳಿಸಿದೆ.

ರಾಜ್ಯದ ಸಮಾಜದ ಬಡ ವರ್ಗದವರಿಗೆ 200 ಗಜ ಭೂಮಿ ಮತ್ತು ಎರಡು ಕೋಣೆಗಳಿರುವ ಮನೆಯನ್ನು ನೀಡಲಾಗುವುದು. ಹಳೆಯ ಪಿಂಚಣಿ ಯೋಜನೆಯನ್ನು(OPS) ಮರುಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ನಡೆಸುವ ಬದ್ಧತೆ ಪ್ರಣಾಳಿಕೆಯ ಮತ್ತೊಂದು ಪ್ರಮುಖ ಅಂಶವಾಗಿದ್ದು, ಈ ವಿಚಾರವನ್ನು ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ಹೆಚ್ಚುವರಿಯಾಗಿ, ಪಕ್ಷವು ಕ್ರೀಮಿ ಲೇಯರ್ ಆದಾಯ ಮಿತಿಯನ್ನು 10 ಲಕ್ಷಕ್ಕೆ ಏರಿಸುವ ಯೋಜನೆಯನ್ನು ಪ್ರಕಟಿಸಿತು. ಪಕ್ಷವು ಪ್ರಣಾಳಿಕೆಯಲ್ಲಿ ಯುವಕರಿಗೆ 2 ಲಕ್ಷ ಕಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ರಾಜ್ಯವನ್ನು ಮಾದಕ ವ್ಯಸನ ಮುಕ್ತ ಮಾಡುವುದಾಗಿ ಭರವಸೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read