ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಜನರ ಜೀವನದಲ್ಲಿ ನೆಮ್ಮದಿ ಮತ್ತು ಆರ್ಥಿಕ ಸುಧಾರಣೆಗಳನ್ನು ತಂದಿವೆ. ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಇದುವರೆಗೆ 1,366.64 ಕೋಟಿ ರೂ. ಮೊತ್ತದ ನೆರವು ಒದಗಿಸಿದ್ದು, ಯಾವುದೇ ಜಾತಿ, ಮತ, ಭಾಷೆ ಬೇಧವಿಲ್ಲದೇ ಸರ್ವರಿಗೂ ಎಲ್ಲಾ ಸಮುದಾಯಗಳಿಗೆ ಯೋಜನೆಗಳು ತಲುಪಿದ್ದು, ಸಾವಿರಾರು ಕುಟುಂಬಗಳ ಲಕ್ಷಾಂತರ ಮಂದಿ ಸಂತಸ ಇಮ್ಮಡಿಗೊಂಡಿದೆ.
ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ‘ಶಕ್ತಿ’ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 17.73 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ರೂ.523.39 ಕೋಟಿ ವೆಚ್ಚದ ಉಚಿತ ಟಿಕೆಟ್ ವಿತರಿಸಲಾಗಿದ್ದು, ಪ್ರತಿದಿನ ಸರಾಸರಿ 1,83,461 ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು, ರೂ.54,79,363 ರಷ್ಟು ಮೊತ್ತದ ಉಚಿತ ಟಿಕೆಟ್ ವಿತರಣೆ ಮಾಡಲಾಗುತ್ತಿದೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಜರಿಗೆ ತಂದಿರುವ, ಕುಟುಂಬದ ಯಜಮಾನಿಗೆ ಪ್ರತೀ ತಿಂಗಳು ರೂ.2,000 ನೀಡುವ ‘ಗೃಹಲಕ್ಷ್ಮಿ’ ಯೋಜನೆಯಡಿ 3,37,155 ಫಲಾನುಭವಿಗಳನ್ನು ನೋಂದಣಿ ಮಾಡಿ, ರೂ.15.58 ಕೋಟಿ ಮೊತ್ತವನ್ನು ಡಿಬಿಟಿ ಮೂಲಕ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದು, ಅರ್ಹ ಎಲ್ಲಾ ಮಹಿಳೆಯನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುತ್ತಿದ್ದು, ನೋಂದಣಿ ಸಂದರ್ಭದಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.
ಗೃಹಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ‘ಗೃಹಜ್ಯೋತಿ’ ಯೋಜನೆಯಡಿ 3,95,281 ಸ್ಥಾವರಗಳನ್ನು ನೋಂದಣಿ ಮಾಡಿ, ಶೇ.99 ರಷ್ಟು ಸಾಧನೆ ಮಾಡಿದ್ದು ರೂ.510.98 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದ್ದು ಪ್ರತೀ ತಿಂಗಳು ಸರಾಸರಿ ರೂ.17.62 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಹಸಿವು ಮುಕ್ತ ಕರ್ನಾಟಕ ಉದ್ದೇಶದಿಂದ ಆಹಾರ ಭದ್ರತಾ ಯೋಜನೆಯಡಿ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆಯಡಿ ಡಿಬಿಟಿ ಮೂಲಕ 298.89 ಕೋಟಿ ರೂ ಜಮೆ ಮಾಡಲಾಗಿದ್ದು, ಪ್ರಸ್ತುತ ಸಾರ್ವಜನಿಕ ವಿತರಣಾ ಪದ್ದತಿಯಡಿ ಅರ್ಹ ಫಲಾನುಭವಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ತೇರ್ಗಡೆಯಾದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ನಿರುದ್ಯೋಗಿ ಭತ್ಯೆ ನೀಡುವ ‘ಯುವನಿಧಿ’ ಯೋಜನೆಯಡಿ 8,303 ಮಂದಿಯನ್ನು ನೋಂದಾಯಿಸಿ 17.80 ಕೋಟಿ ರೂ ಪಾವತಿಸಲಾಗುತ್ತಿದೆ.
ಯುವನಿಧಿ ಫಲಾನುಭವಿ ಹೊನ್ನಾವರದ ಮಂಕಿ ಗ್ರಾಮದ ವಿನಯ ನಾಯಕ ಮಾತನಾಡಿ, “ಬಿಎ ಪದವಿ ಮುಗಿಸಿ, ಉದ್ಯೋಗ ಅರಸಿ, ಮುಂದಿನ ಭವಿಷ್ಯವನ್ನು ಯೋಚಿಸಿ ಮನೆಯಲ್ಲಿ ಕುಳಿತಿದ್ದಾಗ, ಯುವನಿಧಿ ಯೋಜನೆಯು ನನ್ನ ನೆರವಿಗೆ ಬಂದಿದ್ದು, ಪ್ರತಿ ತಿಂಗಳು ರೂ.3,000 ದೊರೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಗತ್ಯವಾದ ಪುಸ್ತಕಗಳನ್ನು ಖರೀದಿಸಲು ಯುವನಿಧಿಯ ಮೊತ್ತ ನನಗೆ ನೆರವಾಗಿದೆ” ಎಂದರು.
ಯಲ್ಲಾಪುರದ ಕಮಲಾಕರ ಹೆಗಡೆ ಮಾತನಾಡಿ, “ಗೃಹಜ್ಯೋತಿ ಯೋಜನೆಯ ಮೂಲಕ ನನಗೆ ವಿದ್ಯುತ್ ಬಿಲ್ ಉಚಿತವಾಗಿರುವುದರಿಂದ ಪ್ರತೀ ತಿಂಗಳು ರೂ.1,500 ಉಳಿತಾಯವಾಗುತ್ತಿದೆ, ಈ ಉಳಿತಾಯದ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತಿತರ ವೆಚ್ಚಗಳಿಗೆ ಬಳಸುತ್ತಿದ್ದೇನೆ. ಇದು ಅತ್ಯಂತ ಉತ್ತಮ ಯೋಜನೆಯಾಗಿದ್ದು, ಇದೇ ರೀತಿ ಮುಂದುವರೆಯಬೇಕು” ಎಂದು ಹೇಳಿದರು.
ಮಂಜುಳಾ ದೀಪಕ ಲಮಾಣಿ ಮಾತನಾಡಿ, “ತುಂಬಾ ಬಡವರಾಗಿದ್ದ ನನಗೆ ಗೃಹಲಕ್ಷಿö್ಮ ಹಣದಿಂದ ತುಂಬಾ ಸಹಾಯವಾಗಿದ್ದು, ಈ ಹಣದಿಂದ ಲಮಾಣಿ ಕಸೂತಿ ಡ್ರೆಸ್ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದೇನೆ , ಇದರಿಂದ ನನ್ನ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ನೆರವಾಗಿದೆ” ಎಂದರು.
“ಜಿಲ್ಲೆಯಲ್ಲಿ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಶೇ.100 ರಷ್ಟು ಅನುಷ್ಠಾನಗೊಳಿಸಲು, ಜಿಲ್ಲಾ ಮತ್ತು ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಕಟಿಬದ್ದವಾಗಿ, ಇದಕ್ಕಾಗಿ ಅಹರ್ನಿಶಿ ಶ್ರಮಿಸಲಾಗುವುದು” ಎಂದು ಸತೀಶ್ ಪಾಂಡುರಂಗ ನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಮಾತ್ರವಲ್ಲದೇ ಈ ಯೋಜನೆಗಳ ಪ್ರಯೋಜನದಿಂದ ಯಾವುದೇ ಅರ್ಹ ವ್ಯಕ್ತಿ ವಂಚಿತನಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ರಚಿಸಿ, ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಜಿಲ್ಲಾ ಮತ್ತು ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಕಚೇರಿಯನ್ನು ತೆರೆದು, ಯೋಜನೆಯಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಯೋಜನೆಗಳ ನೆರವು ಒದಗಿಸಲಾಗುತ್ತಿದೆ.

