ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿಲ್ಲ ಎಂದು ತಿಳಿದುಬಂದಿದೆ.
29 ಕಾರಣಗಳನ್ನು ನೀಡಿ ರಾಜ್ಯಪಾಕರು ಮಸೂದೆಗೆ ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ. ದ್ವೇಷ ಭಾಷಣ ತಡೆ ಬಿಲ್ ಬಗ್ಗೆ ಉಭಯ ಸದನಗಳಲ್ಲಿ ಸಂಪೂರ್ಣವಾಗಿ ಚರ್ಚೆಯಾಗಿಲ್ಲ. ದ್ವೇಷ ಭಾಷಣ ತಡೆ ಮಸೂದೆಯಲ್ಲಿ ಕಾನೂನು ತೊಡಕುಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕು ಕಸಿಯುವ ಸಾಧ್ಯತೆ, ವಿಧೇಯಕದ ಮೂಲಕ ಕಾನೂನು ದುರುಪಯೋಗ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಭೀತಿ ಹಾಗೂ ದೇಶದಲ್ಲಿ ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ಜಾರಿಯಲ್ಲಿರುವುದನ್ನೂ ರಾಜ್ಯಪಾಲರು ತಮ್ಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ.
ಬೌದ್ಧಿಕ ಚಿಂತನೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ, ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ರಾಜ್ಯಪಾಲರಿಂದ ವ್ಯಕ್ತವಾಗಿದೆ.
ಹೀಗೆ 29 ಕಾರಣಗಳನ್ನು ನೀಡಿ ಮಸುದೆಗೆ ಅಂಕಿತ ಹಾಕದೇ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ದ್ವೇಷ ಭಾಷಣ ತಡೆ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ದ್ವೇಷ ಭಾಷಣ ನಿಯಂತ್ರಣ ಮಸೂದೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದ್ವೇಷ ಭಾಷಣ ತಡೆ ಮಸೂದೆ ವಿರುದ್ಧ 40 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ರಾಜ್ಯಪಾಲರು ಕೂಡ ಮಸೂದೆಗೆ ಅಂಕಿತ ಹಾಕದಿರುವುದು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ದ್ವೇಷ ಭಾಷಣ ತಡೆ ಮಸೂದೆ ವಿಚಾರವಗಿ ಮುಂದಿನ ದಿನಗಳಲ್ಲಿ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ? ಕಾದುನೋಡಬೇಕಿದೆ.

