ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. 2008ರಲ್ಲಿ ರಚನೆಯಾದ ಕ್ಷೇತ್ರದಲ್ಲಿ 4 ಚುನಾವಣೆ ಗೆಲ್ಲುವ ಮೂಲಕ ಶಾಮನೂರು ಶಿವಶಂಕರಪ್ಪ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಇದುವರೆಗೂ ಕ್ಷೇತ್ರ ಗೆದ್ದಿಲ್ಲ.
ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಚರ್ಚೆಯ ವಿಚಾರ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ನೀಡಬೇಕು. ಉಪ ಚುನಾವಣೆಯಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಸಂಪ್ರದಾಯ ಪಾಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರು, ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಸಂಸದರು.
ಕುಟುಂಬಕ್ಕೆ ಟಿಕೆಟ್ ಬೇಡ: ಶಾಮನೂರು ಶಿವಶಂಕರಪ್ಪ ಕುಟುಂಬದಲ್ಲಿ ಒಬ್ಬರು ಸಂಸದರು, ಒಬ್ಬರು ಸಚಿವರು ಇರುವ ಕಾರಣಕ್ಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ ಟಿಕೆಟ್ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬೇಡ ಕಾರ್ಯಕರ್ತರಿಗೆ ನೀಡಿ ಎಂಬ ಬೇಡಿಕೆ ಇದೆ.
ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತಗಳಿವೆ. ಆದ್ದರಿಂದ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂಬ ಬೇಡಿಕೆ ಇದೆ. ಕಾಂಗ್ರೆಸ್ ಟಿಕೆಟ್‌ಗಾಗಿ ಸೈಯದ್ ಸೈಫುಲ್ಲಾ, ಅವರ ಪುತ್ರ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಇನ್ನಿತರರು ಟಿಕೆಟ್ ಆಕಾಂಕ್ಷಿಗಳು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಓಡಾಡುತ್ತಿದ್ದು ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಸಿಕ್ಕಿದೆ ಎಂದು ಪೋಸ್ಟ್ ಹಾಕಲಾಗಿದೆ.
ಆ ಪೋಸ್ಟ್‌ಗಳ ಮಾಹಿತಿ ಪ್ರಕಾರ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ. ಆದರೆ ಈ ಕುರಿತು ಯಾರೂ ಸಹ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಸಮರ್ಥ ಶಾಮನೂರು ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಪುತ್ರ. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು. ಅವರೇ ಈಗ ಉಪ ಚುನಾವಣೆ ಅಭ್ಯರ್ಥಿ ಎಂದು ಪೋಸ್ಟ್‌ಗಳನ್ನು ಹಾಕಲಾಗಿದೆ.
ಆದರೆ ಕೆಲವು ಮುಸ್ಲಿಂ ನಾಯಕರು ಶಾಮನೂರು ಕುಟುಂಬದ ಬದಲಿಗೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಮುಸ್ಲಿಂರಿಗೆ ಟಿಕೆಟ್ ಸಿಕ್ಕರೆ ಪಕ್ಷಾತೀತವಾಗಿ ಅಭ್ಯರ್ಥಿಗೆ ಬೆನ್ನೆಲುಬಾಗಿ ನಿಂತು ಗೆಲ್ಲಿಸುತ್ತೇವೆ. ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇವೆ ಎಂದು ಹೇಳಿದ್ದಾರೆ.
ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಬೆಂಬಲಿಸಿದ್ದೇವೆ. ಇದೀಗ ಅವರು ನಿಧನರಾದರು ಅಂದಾಕ್ಷಣ ಅವರ ಕುಟುಂಬಕ್ಕೆ ಟಿಕೆಟ್ ಕೊಡಬೇಕೆಂಬ ನಿಯಮವಿಲ್ಲ. ಕ್ಷೇತ್ರದಲ್ಲಿ ಶೇ 80ರಷ್ಟು ಅಹಿಂದ ಮತದಾರರಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿ ಎಂಬುದು ಬೇಡಿಕೆಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ನಾಯಕರ ಬಳಿ ಉಪ ಚುನಾವಣೆ ಟಿಕೆಟ್‌ಗಾಗಿ ಶಾಮನೂರು ಶಿವಶಂಕರಪ್ಪ ಕುಟುಂಬ ಬೇಡಿಕೆ ಇಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಮರ್ಥ ಶಾಮನೂರು ಹೆಸರು ಓಡಾಡುತ್ತಿದೆ ಅಷ್ಟೇ.
ಕಾಂಗ್ರೆಸ್ ನಾಯಕರು ಉಪ ಚುನಾವಣೆ ಅಭ್ಯರ್ಥಿ ಘೋಷಣೆ ಮಾಡುವಾಗ ಶಾಮನೂರು ಶಿವಶಂಕರಪ್ಪ ಕುಟುಂಬವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಹ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇನ್ನೂ ಸಹ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮಾರ್ಚ್‌ನಲ್ಲಿ ಚುನಾವಣಾ ಆಯೋಗ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.

