ಮುಂಬೈ: ಆಹಾರ ಕಲಬೆರಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ನಕಲಿ (ನಾನ್-ಡೈರಿ) ನಕಲಿ ಪನ್ನೀರ್ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈ ನಿರ್ಧಾರ ಕೈಗೊಂಡಿರುವ ಛತ್ತೀಸ್‌ಗಢದ ನಂತರದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.
ಆಹಾರ ಸುರಕ್ಷತಾ ಆಯುಕ್ತ ತುಕಾರಾಂ ಮುಂಧೆ ಹೊರಡಿಸಿರುವ ಆದೇಶದ ಪ್ರಕಾರ, ಅನಲಾಗ್ ಅಥವಾ ನಾನ್-ಡೈರಿ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ, ವಿತರಣೆ ಮತ್ತು ಮಾರಾಟಕ್ಕೆ ಒದಗಿಸುವ ಎಲ್ಲ ಚಟುವಟಿಕೆಗಳಿಗೆ ರಾಜ್ಯಾದ್ಯಂತ ನಿಷೇಧ ಹೇರಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಬಹುದು. ಕಲಬೆರಕೆಯ ಆಹಾರ ಸೇವನೆಯಿಂದ ಯಾರಾದರೂ ಮೃತಪಟ್ಟರೆ, ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ ₹10 ಲಕ್ಷ ದಂಡ ವಿಧಿಸುವ ಅವಕಾಶವೂ ಇದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA), ಅನಲಾಗ್ ಪನೀರ್ ಅನ್ನು ನಿಜವಾದ ಹಾಲಿನ ಪನೀರ್ ಎಂದು ಮಾರಾಟ ಮಾಡುವುದು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಎಚ್ಚರಿಕೆ ನೀಡಿದೆ. ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಅನಲಾಗ್ ಪನೀರ್ ಎಂದರೇನು?
ಅನಲಾಗ್ ಅಥವಾ ನಾನ್-ಡೈರಿ ಪನೀರ್ ಅನ್ನು ಸಾಮಾನ್ಯವಾಗಿ ಸಸ್ಯಜನ್ಯ ಕೊಬ್ಬು, ಪಾಮ್ ಆಯಿಲ್, ವೆಜಿಟೆಬಲ್ ಎಣ್ಣೆಗಳು ಹಾಗೂ ಇತರ ಹಾಲೇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಪನೀರ್‌ನಂತೆ ಕಾಣಿಸಿದರೂ, ಹಾಲಿನಿಂದ ತಯಾರಿಸಿದ ನೈಜ ಪನೀರ್‌ಗೆ ಪರ್ಯಾಯ ಉತ್ಪನ್ನವಾಗಿದೆ.
FSSAI ನಿಯಮವೇನು?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳ ಪ್ರಕಾರ, ಪನೀರ್ ಅನ್ನು ಹಾಲಿನಿಂದ ಮಾತ್ರ ತಯಾರಿಸಬೇಕು. ಇದರಲ್ಲಿ ಪಿಷ್ಟ (ಸ್ಟಾರ್ಚ್), ಹಾಲೇತರ ಕೊಬ್ಬು ಅಥವಾ ಕೃತಕ ಪದಾರ್ಥಗಳು ಇರಬಾರದು. ಅನಲಾಗ್ ಪನೀರ್ ಮಾರಾಟಕ್ಕೆ FSSAI ಅವಕಾಶ ನೀಡಿದರೂ, ಅದನ್ನು ಸ್ಪಷ್ಟವಾಗಿ ‘ಅನಲಾಗ್ ಪನೀರ್’ ಎಂದು ಲೇಬಲ್ ಮಾಡುವುದು ಕಡ್ಡಾಯವಾಗಿದೆ.
ಕಲಬೆರಕೆ ವಿರುದ್ಧ ಕಾರ್ಯಾಚರಣೆ
ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಲ್ಲಿ ನಕಲಿ ಹಾಲು ಮತ್ತು ಪನೀರ್ ತಯಾರಿಕಾ ಘಟಕಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಮೇ ತಿಂಗಳಿನಿಂದ ಆರಂಭವಾದ ದಾಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲಬೆರಕೆ ಹಾಲು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪುಣೆಯ ಮಂಜರಿ ಖುರ್ಡ್ ಪ್ರದೇಶದ ಗೋದಾಮಿನ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1,400 ಕೆಜಿ ನಕಲಿ ಪನೀರ್ ವಶಪಡಿಸಿಕೊಂಡಿದ್ದರು. ಜೊತೆಗೆ 1,800 ಕೆಜಿ ಸ್ಕಿಮ್ಡ್ ಮಿಲ್ಕ್ ಪೌಡರ್, 400 ಕೆಜಿ ಗ್ಲಿಸರೋಲ್ ಮೊನೋಸ್ಟಿಯರೇಟ್ (GMS) ಪೌಡರ್, 718 ಲೀಟರ್ ಪಾಮ್ ಆಯಿಲ್ ಸೇರಿದಂತೆ ನಕಲಿ ಹಾಲು ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

