ಬೆಂಗಳೂರು: ಜೂನ್ 7 ರಂದು ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಏಳು ರಾಜ್ಯಗಳಲ್ಲಿ ಮುಂದೂಡಿಕೆಯಾಗಿದ್ದ ಕಾಮೆಡ್-ಕೆ ಯುಜಿಇಟಿ ಹಾಗೂ ಯೂನಿಗೇಜ್ ಪರೀಕ್ಷೆ ಭಾನುವಾರ ನಡೆದಿದೆ.
ಮೇ 10 ಮತ್ತು 20ರಂದು ಎರಡು ಹಂತದಲ್ಲಿ ನಡೆದ ಪರೀಕ್ಷೆ ಫಲಿತಾಂಶ ಹಾಗೂ ರ್ಯಾಂಕ್ ಪಟ್ಟಿ ಜೂನ್ 7 ರಂದು ಪ್ರಕಟಿಸಲಾಗುವುದು ಎಂದು ಕಾಮೆಡ್-ಕೆ ಮಾಹಿತಿ ನೀಡಿದೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜು ಗಳಲ್ಲಿ ಸೀಟುಗಳ ಭರ್ತಿಗೆ 18 ರಾಜ್ಯಗಳಲ್ಲಿ ಕಾಮೆಡ್-ಕೆ ಯುಜಿಇಟಿ ನಿಗದಿಪಡಿಸಿದ್ದು, ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ. ಉತ್ತರಾಖಂಡ್, ದೆಹಲಿ, ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣದಲ್ಲಿ ಪರೀಕ್ಷೆ ಮುಂದೂಡಲಾಗಿತ್ತು. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಮುಂದೂಡಿಕೆಯಾಗಿದ್ದ ರಾಜ್ಯಗಳ 22 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6639 ವಿದ್ಯಾರ್ಥಿಗಳಲ್ಲಿ 4335 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಎರಡು ಹಂತದಲ್ಲಿ ಪರೀಕ್ಷೆಗೆ ಸಂಬಂಧಿಸಿದ ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 28 ರಂದು ಕಾಮೆಡ್-ಕೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಆಕ್ಷೇಪಣಿಗಳಿದ್ದಲ್ಲಿ ಸಲ್ಲಿಸಬಹುದು. ಜೂನ್ 7 ರಂದು ಅಂತಿಮ ಕೀ ಉತ್ತರ, ರ್ಯಾಂಕಿಂಗ್ ಪಟ್ಟಿಯೊಂದಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.