ಹಿಂದೂ ಧರ್ಮದಲ್ಲಿ ಯಾವುದೇ ಹೊಸ ಕೆಲಸ ಅಥವಾ ಶುಭ ಸಮಾರಂಭವನ್ನು ಆರಂಭಿಸುವ ಮೊದಲು ತೆಂಗಿನಕಾಯಿ ಒಡೆಯುವುದು ಒಂದು ಅವಿಭಾಜ್ಯ ಸಂಪ್ರದಾಯವಾಗಿದೆ. ಇದು ಕೇವಲ ಧಾರ್ಮಿಕ ಕ್ರಿಯೆಯಲ್ಲ, ಇದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಮನೋವೈಜ್ಞಾನಿಕ ಅರ್ಥಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಯಿರಿ.
ತೆಂಗಿನಕಾಯಿಯನ್ನು ‘ಶ್ರೀಫಲ’ ಎನ್ನುವುದೇಕೆ?
ಹಿಂದೂ ಪುರಾಣಗಳ ಪ್ರಕಾರ, ವಿಷ್ಣುವು ಭೂಮಿಯ ಮೇಲೆ ಅವತರಿಸಿದಾಗ ತನ್ನೊಂದಿಗೆ ಲಕ್ಷ್ಮಿ ದೇವಿ, ಕಾಮಧೇನು ಮತ್ತು ತೆಂಗಿನ ಮರವನ್ನು (ಕಲ್ಪವೃಕ್ಷ) ತಂದನು ಎಂದು ನಂಬಲಾಗಿದೆ. ಹೀಗಾಗಿಯೇ ತೆಂಗಿನಕಾಯಿಯನ್ನು ‘ಶ್ರೀಫಲ’ ಅಥವಾ ಲಕ್ಷ್ಮಿಯ ಹಣ್ಣು ಎಂದು ಕರೆಯಲಾಗುತ್ತದೆ.
ಶುಭ ಕಾರ್ಯಕ್ಕೂ ಮುನ್ನ ತೆಂಗಿನಕಾಯಿ ಒಡೆಯುವುದರ ಹಿಂದಿನ ರಹಸ್ಯಗಳು:
- ಅಹಂಕಾರದ ವಿನಾಶ: ತೆಂಗಿನಕಾಯಿಯ ಗಟ್ಟಿಯಾದ ಹೊರಚಿಪ್ಪು ಮನುಷ್ಯನ ಅಹಂಕಾರ ಮತ್ತು ಬಾಹ್ಯ ಪ್ರಪಂಚದ ಮೋಹವನ್ನು ಸೂಚಿಸುತ್ತದೆ. ಅದನ್ನು ಒಡೆಯುವುದು ಎಂದರೆ ನಮ್ಮ ಅಹಂಕಾರವನ್ನು ತ್ಯಜಿಸಿ, ದೈವಿಕ ಶಕ್ತಿಗೆ ಸಂಪೂರ್ಣವಾಗಿ ಶರಣಾಗುವುದು ಎಂದರ್ಥ.
- ಮನಸ್ಸಿನ ಶುದ್ಧತೆ: ಒಡೆದ ಕಾಯಿಯ ಒಳಗಿರುವ ಬಿಳಿ ಭಾಗವು ಶುದ್ಧ ಮನಸ್ಸು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ದೇವರ ಮುಂದೆ ನಮ್ಮ ಮನಸ್ಸು ಹೀಗೆಯೇ ನಿರ್ಮಲವಾಗಿರಲಿ ಎಂಬುದು ಇದರ ಆಶಯ.
- ತ್ರಿಮೂರ್ತಿಗಳ ವಾಸ: ತೆಂಗಿನಕಾಯಿಯ ಮೇಲಿರುವ ಮೂರು ಕಣ್ಣುಗಳನ್ನು ಶಿವನ ತ್ರಿನೇತ್ರಕ್ಕೆ ಹೋಲಿಸಲಾಗುತ್ತದೆ. ಅದರಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ ಎಂದು ನಂಬಲಾಗಿದ್ದು, ಅವರ ಆಶೀರ್ವಾದ ಪಡೆಯಲು ಇದನ್ನು ಒಡೆಯಲಾಗುತ್ತದೆ.
ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎನ್ನವುದೇಕೆ?
ಇದು ಬಹಳಷ್ಟು ಜನರ ಮನಸ್ಸಿನಲ್ಲಿರುವ ಪ್ರಶ್ನೆ. ಶಾಸ್ತ್ರಗಳ ಪ್ರಕಾರ ತೆಂಗಿನಕಾಯಿಯನ್ನು ಒಂದು ‘ಬೀಜ’ ಎಂದು ಪರಿಗಣಿಸಲಾಗುತ್ತದೆ. ಸೃಷ್ಟಿಯ ಶಕ್ತಿ ಮತ್ತು ಸಂತಾನೋತ್ಪತ್ತಿಯ ಸಂಕೇತವಾಗಿರುವ ಬೀಜವನ್ನು ಮಹಿಳೆಯರು ಒಡೆಯುವುದು ಅಶುಭ ಎಂದು ಹಳೆಯ ಸಂಪ್ರದಾಯಗಳು ಹೇಳುತ್ತವೆ. ಸ್ತ್ರೀಯರು ಸ್ವತಃ ಸೃಷ್ಟಿಕರ್ತೆಯರಾಗಿರುವುದರಿಂದ (ಮಗುವಿಗೆ ಜನ್ಮ ನೀಡುವುದರಿಂದ), ಬೀಜರೂಪಿ ಹಣ್ಣನ್ನು ಒಡೆಯುವುದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ನಂಬಿಕೆ ಇತ್ತು. ಆದರೆ, ಇಂದಿನ ಕಾಲದಲ್ಲಿ ಅನೇಕ ಕಡೆ ಮಹಿಳೆಯರೂ ಕೂಡ ಭಕ್ತಿಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ.
ಸಂಕಷ್ಟ ನಿವಾರಣೆಗೆ ತೆಂಗಿನಕಾಯಿಯ ಸರಳ ಪರಿಹಾರಗಳು:
- ಹಣಕಾಸಿನ ತೊಂದರೆಗೆ: ಕೆಂಪು ಬಟ್ಟೆಯಲ್ಲಿ ಇಡೀ ತೆಂಗಿನಕಾಯಿಯನ್ನು ಕಟ್ಟಿ ಲಕ್ಷ್ಮಿ ದೇವಿಗೆ ಅರ್ಪಿಸಿ, ನಂತರ ಅದನ್ನು ಮನೆಯ ಧನ ಸಂಗ್ರಹಿಸುವ ಸ್ಥಳದಲ್ಲಿಟ್ಟರೆ ಆರ್ಥಿಕ ಲಾಭವಾಗುತ್ತದೆ ಎಂಬ ನಂಬಿಕೆಯಿದೆ.
- ಶನಿ ದೋಷಕ್ಕೆ: ಶನಿವಾರದಂದು ಒಣ ತೆಂಗಿನಕಾಯಿಯನ್ನು ನಿಮ್ಮ ತಲೆಯ ಸುತ್ತ ಏಳು ಬಾರಿ ನಿವಾಳಿಸಿ ಹರಿಯುವ ನೀರಿನಲ್ಲಿ ಬಿಟ್ಟರೆ ಮಾನಸಿಕ ನೆಮ್ಮದಿ ಸಿಗುತ್ತದೆ.
- ನಕಾರಾತ್ಮಕತೆ ದೂರ ಮಾಡಲು: ಮನೆಯಲ್ಲಿ ಸುಖ-ಶಾಂತಿ ನೆಲೆಸಲು ತೆಂಗಿನಕಾಯಿಯನ್ನು ಮೈದಾನ ಅಥವಾ ನಿರ್ಜನ ಪ್ರದೇಶದಲ್ಲಿ ಹೂಳುವ ಪದ್ಧತಿಯೂ ಕೆಲವು ಕಡೆ ರೂಢಿಯಲ್ಲಿದೆ.

