ಬೆಂಗಳೂರು: ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯಡಿ ಕೈಗೆಟುಕುವ ದರದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣ ಖರೀದಿಸಲಾಗುವುದು.
ಟ್ರ್ಯಾಕ್ಟರ್, ರೋಟವೇಟರ್, ಕೊಯ್ಲು ಯಂತ್ರ ಮತ್ತು ಔಷಧಿ ಸಿಂಪಡಿಸುವ ಡ್ರೋನ್ ಗಳು ಒಂದೇ ಸೂರಿನಡಿ ಬಾಡಿಗೆಗೆ ಲಭ್ಯವಿರುತ್ತದೆ. ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಾಡಿಗೆ ದರದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಲಾಗುವುದು. ಕೃಷಿ ವೆಚ್ಚವನ್ನು ಕಡಿಮೆ ಮಾಡಲು ರಿಯಾಯಿತಿ ದರ ಸುಲಭವಾಗಿ ಆಧುನಿಕ ಯಂತ್ರೋಪಕರಣಗಳ ಬಳಕೆ ಮಾಡಲಾಗುವುದು.
ಡ್ರೋನ್ ಮತ್ತು ಉಪಗ್ರಹ ಸಮೀಕ್ಷೆಯ ಮೂಲಕ ಬೆಳೆಯ ವಿಸ್ತೀರ್ಣ, ಬೆಳೆಯ ಆರೋಗ್ಯ ಹಾಗೂ ರೋಗ ಕೀಟ ಬಾಧೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಇದಕ್ಕಾಗಿ ಸಿಎಂ ರೈತ ಚೈತನ್ಯ ಡಿಜಿಟಲ್ ಅಗ್ರಿಟೆಕ್ ಮಿಷನ್ ಸ್ಮಾರ್ಟ್ ಕೃಷಿಗಾಗಿ ಆಧುನಿಕ ತಂತ್ರಜ್ಞಾನ ಯೋಜನೆ ತರಲಾಗಿದೆ. ಡಿಜಿಟಲ್ ವೇದಿಕೆಯ ಮೂಲಕ ಬೆಳೆಗಳ ನಿಖರ ಮತ್ತು ಪಾರದರ್ಶಕ ದೈನಂದಿನ ಮಾರುಕಟ್ಟೆ ದರ ವಿವರ ಲಭ್ಯವಾಗಲಿದೆ. ಉತ್ತಮ ಬೆಳೆ ನಿರ್ವಹಣೆ ಸಕಾಲಿಕ ನಿರ್ಧಾರ ಹಾಗೂ ಅಧಿಕ ಇಳುವರಿಗಾಗಿ ವೈಜ್ಞಾನಿಕ ಡೇಟಾ ಮಾರ್ಗದರ್ಶನ ಸಿಗಲಿದೆ.
ಕೃಷಿ ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಜೀವನಾಡಿ. ಹೊಲದಿಂದ ಮಾರುಕಟ್ಟೆಯವರೆಗಿನ ಪ್ರತಿಯೊಂದು ಹಂತವನ್ನೂ ಬಲಪಡಿಸಿ, ನಮ್ಮ ರೈತರಿಗೆ ಹಾಗೂ ಗ್ರಾಮೀಣ ಕುಟುಂಬಗಳಿಗೆ ಉಜ್ವಲ ಭವಿಷ್ಯ ರೂಪಿಸುವುದೇ ಸರ್ಕಾರದ ಪ್ರಮುಖ ಆದ್ಯತೆ.
ತಂತ್ರಜ್ಞಾನ, ಸುಧಾರಿತ ಕೃಷಿ ನೆರವು, ಮಾರುಕಟ್ಟೆ ಸಂಪರ್ಕ, ಹವಾಮಾನ ಆಧಾರಿತ ಕೃಷಿ ಹಾಗೂ ಹೊಸ ಗ್ರಾಮೀಣ ಅವಕಾಶಗಳನ್ನು ಒಗ್ಗೂಡಿಸಿ, ನಾಡಿನ ಕೃಷಿ ಸಮುದಾಯದ ಬದುಕನ್ನು ಹೆಚ್ಚು ಸುಭದ್ರ, ಸುಸ್ಥಿರ ಮತ್ತು ಸಮೃದ್ಧವಾಗಿಸಲು ಸರ್ಕಾರ ಶ್ರಮಿಸುತ್ತಿದೆ.
ಕೃಷಿ ಉತ್ಪನ್ನಗಳ ಗುಣಮಟ್ಟ ಪ್ರಮಾಣೀಕರಣ, ಗ್ರೇಡಿಂಗ್, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ KAPPEC ಸಂಸ್ಥೆಯ ಬಲವರ್ಧನೆ, ಮಾವು, ದಾಳಿಂಬೆ, ಸಿರಿಧಾನ್ಯಗಳು, ಅಕ್ಕಿ ಹಾಗೂ ತೊಗರಿಬೇಳೆ ರಜ್ಜಿಗೆ ವಿಶೇಷ ಆದ್ಯತೆ.
ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಹೆಚ್ಚಿನ ಮೌಲ್ಯ ಒದಗಿಸಲು ಹೊಸ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಸಂಪರ್ಕ, ಜಲ ಸಂರಕ್ಷಣೆ, ಹವಾಮಾನ-ಸ್ನೇಹಿ ಕೃಷಿ ತಂತ್ರಜ್ಞಾನ ಹಾಗೂ ಮಣ್ಣಿನ ಸಾರವೃದ್ಧಿಗೆ ಉತ್ತೇಜನ
ಕಡಿಮೆ ಮಳೆ ಮತ್ತು ಅಧಿಕ ಮಳೆ ಬೀಳುವ ಪ್ರದೇಶಗಳಿಗೆ ತಕ್ಕಂತೆ ವಿಶೇಷ ಯೋಜನೆ, ಜೊತೆಗೆ ಕಟಾವಿನಿಂದ ಮಾರಾಟದವರೆಗೆ ಸಂಪೂರ್ಣ ಬೆಂಬಲ, ರೈತರ ಜೀವನಮಟ್ಟ ಮತ್ತು ಆದಾಯ ಸುಧಾರಿಸಲು ಹೈನುಗಾರಿಕೆ ಹಾಗೂ ತೋಟಗಾರಿಕೆ/ಮರ ಆಧಾರಿತ ಕೃಷಿಗೆ ಉತ್ತೇಜನ ನೀಡಲಾಗುವುದು.
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ವಿವಿಧ ಜಿಲ್ಲೆಗಳ 31 ತಾಲೂಕುಗಳಲ್ಲಿ ಮೊದಲು ಜಾರಿಗೊಳಿಸಲಾಗುವುದು. ಇದು ಯಶಸ್ವಿಯಾದರೆ ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಇದಕ್ಕಾಗಿ ಪ್ರತಿ ಹಳ್ಳಿಯಲ್ಲೂ ಟ್ರ್ಯಾಕ್ಟರ್ ಹೊಂದಿರುವ ರೈತರಿಂದ ಐದು ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಆ ಟ್ರ್ಯಾಕ್ಟರ್‌ಗಳಿಂದ ಸಣ್ಣ ರೈತರ ಜಮೀನು ಉಳುಮೆ ಮಾಡಿಕೊಡಲಾಗುತ್ತದೆ. ಒಂದು ವೇಳೆ ಯಾವುದೇ ಹಳ್ಳಿಯಲ್ಲಿ ಟ್ರ್ಯಾಕ್ಟರ್‌ಗಳು ಬಾಡಿಗೆಗೆ ಸಿಗದಿದ್ದರೆ ಅಂತಹ ಹಳ್ಳಿಗಳಿಗೆ ಅಗತ್ಯಾನುಸಾರ ಸರ್ಕಾರದಿಂದಲೇ ಟ್ರ್ಯಾಕ್ಟರ್ ಗಳನ್ನು ಖರೀದಿಸಲಾಗುವುದು. ಇದಕ್ಕಾಗಿ 152 ಕೋಟಿ ರು. ಅನುದಾನ ನೀಡಲಾಗುವುದು ಎಂದು ಹೇಳಲಾಗಿದೆ.

