HomeLatest Newsಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಸಿಎಂ ಸಿದ್ಧರಾಮಯ್ಯ ಮಹತ್ವದ ಸಲಹೆ

ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಸಿಎಂ ಸಿದ್ಧರಾಮಯ್ಯ ಮಹತ್ವದ ಸಲಹೆ

ಬೆಂಗಳೂರು: ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಮಾಡಬೇಕಿದೆ. ಆದ್ದರಿಂದ, “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು.

ಶಿಕ್ಷಣ ನಮ್ಮ‌ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ. ನಾನು ರಾಜಪ್ಪ ಮೇಸ್ಟ್ರಿಂದ ಅಕ್ಷರವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ. ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ. ಇಂಥ ಶಿಕ್ಷಣ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲೆಲ್ಲಾ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಸಂವಿಧಾನ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ, ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ ಸಂವಿಧಾನದ ಮೌಲ್ಯಗಳಾಗಿದ್ದು, ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಮನುಷ್ಯತ್ವ ಹೊಂದಿರುವ ಅತ್ಯುನ್ನತ ನಾಗರಿಕರನ್ನು ಸೃಷ್ಟಿಸಬಹುದು. ಇದನ್ನು ಶಿಕ್ಷಕರು ಅರ್ಥ ಮಾಡಿಕೊಂಡು ನಾಗರಿಕ ಸಮಾಜ ರೂಪಿಸಬೇಕು ಎಂದು ಹೇಳಿದ್ದಾರೆ.

ಜಾತಿ ವ್ಯವಸ್ಥೆ ಇರುವ ನಮ್ಮ ಸಮಾಜದಲ್ಲಿ ಬದಲಾವಣೆ ಆಗಿ ಮಾನವೀಯ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಣ ಕಲಿತೂ ಜಾತಿ ಆಚರಿಸುವುದು, ಕಂದಾಚಾರ-ಮೌಡ್ಯ ಆಚರಿಸುವುದು ಶಿಕ್ಷಣಕ್ಕೆ ಬಗೆಯುವ ದ್ರೋಹ. ಆದ್ದರಿಂದ ವೈಚಾರಿಕತೆ, ವೈಜ್ಞಾನಿಕತೆ, ಪರಧರ್ಮ ಸಹಿಷ್ಣುತೆ ಮೈಗೂಡಿಸಿಕೊಳ್ಳುವ ಶಿಕ್ಷಣ ಕೊಡುವ ನೈತಿಕ ಮತ್ತು ವೃತ್ತಿಪರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ವೈದ್ಯರಾದವರು, ಪ್ರೊಫೆಸರ್ ಗಳು, ಉಪನ್ಯಾಸಕರೂ ಹಣೆ ಬರಹ ನಂಬಿಕೊಂಡಿದ್ದಾರೆ. ಇವರು ಮತ್ತು ಎಂಜಿನಿಯರಿಂಗ್ ಓದಿದವರೂ ಜಾತಿ ಮಾಡುವುದನ್ನು, ಮೌಢ್ಯ ಆಚರಿಸುವುದನ್ನು ನಾನು ನೋಡಿದ್ದೇನೆ. ಹಾಗಾದರೆ ಇವರಿಗೆ ಸಿಕ್ಕ ಶಿಕ್ಷಣ ಎಂಥದ್ದು ಎನ್ನುವುದನ್ನು ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನ ಸಮಾಜ ನಿರ್ಮಾಣ ಆಗಿ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ. ಶೂದ್ರರ ಜೊತೆಗೆ ಮಹಿಳೆಯರನ್ನೂ ಶಿಕ್ಷಣದಿಂದ ಹೊರಗಿಡಲಾಗಿತ್ತು. ಆದರೆ ಈಗ ಶಿಕ್ಷಣದ ಹಕ್ಕಿನ‌ ಕಾರಣಕ್ಕೆ ಅವಕಾಶ ಪಡೆದು ಹೆಚ್ಚೆಚ್ಚು ರ್ಯಾಂಕ್ ಪಡೆಯುತ್ತಿರುವವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ.

ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಕ್ ಇಬ್ಬರೂ ದಮನಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟ ಮೊದಲ ಶಿಕ್ಷಕಿಯರು. ಇವರಿಗೆ ಸೆಗಣಿಯನ್ನೆಲ್ಲಾ ಎಸೆದು ಅವಮಾನಿಸಲಾಗಿತ್ತು. ಈ ಎಲ್ಲಾ ಅವಮಾನ ಸಹಿಸಿಕೊಂಡೂ ಶಿಕ್ಷಣ ನೀಡಿದರು ಎಂದು ಹೇಳಿದ್ದಾರೆ.

ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ಅತ್ಯಂತ ನೈತಿಕ ಮೌಲ್ಯಗಳುಳ್ಳ ಶಿಕ್ಷಕರೂ, ರಾಷ್ಟ್ರಪತಿಗಳೂ ಆಗಿದ್ದರು. ಇವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವ. ಮಧು ಬಂಗಾರಪ್ಪ ಮತ್ತು ಎಂ.ಸಿ.ಸುಧಾಕರ್ ಇಬ್ಬರೂ ನಮ್ಮ ಸರ್ಕಾರದ ಅತ್ಯಂತ ಕ್ರಿಯಾಶೀಲ ಯುವ ಸಚಿವರು. ಇವರು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಮಾಡಬೇಕಿದೆ. ಆದ್ದರಿಂದ, “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular