ರೈತರ ಸಾಲ ವಸೂಲಿಗೆ ಬಲವಂತ ಮಾಡುವಂತಿಲ್ಲ: ಸಿಎಂ ಸೂಚನೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕೆಳಹಂತದ ಸೇತುವೆಗಳು ಮುಳುಗಡೆಯಾಗುತ್ತವೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಶಾಶ್ವತ ಪರ್ಯಾಯ ಮಾರ್ಗ ನಿರ್ಮಾಣದ ಸಾಧ್ಯತೆಗಳನ್ನು ಪರಿಶೀಲಿಸಿ ವರದಿ ಕಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ಹವಾಮಾನ ಮತ್ತು ಮಳೆ-ಬೆಳೆಗಳಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಬುಧವಾರ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ 30 ಕೆಳಹಂತದ ಸೇತುವೆಗಳು ಮುಳುಗಡೆಯಾಗುವುದರಿಂದ ಶಾಶ್ವತ ಪರ್ಯಾಯ ಮಾರ್ಗ ನಿರ್ಮಿಸುವುದು ಸೂಕ್ತವಾಗಿದೆ. ಆದ್ದರಿಂದ ಈ ಕುರಿತು ಪರಿಶೀಲಿಸಿ ವಿಸ್ತೃತವಾದ ವರದಿ ಕಳಿಸಬೇಕು. ಇದನ್ನು ಸರಕಾರದ ಹಂತದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಭೀಮಾ ಸೇರಿದಂತೆ ಪ್ರಮುಖ ನದಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ರೈತರ ಸಾಲ ವಸೂಲಿಗೆ ಬಲವಂತ ಮಾಡುವಂತಿಲ್ಲ

ಖಾಸಗಿ ಸೇರಿದಂತೆ‌ ಯಾವುದೇ ಬ್ಯಾಂಕುಗಳಿಂದ ರೈತರು ಪಡೆದುಕೊಂಡಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡುವ ಮೂಲಕ ಮಾನವ ಜೀವಹಾನಿ ಕಡಿಮೆಗೊಳಿಸುವುದು ಸಾಧ್ಯವಾಗಲಿದೆ. ಪ್ರತಿವರ್ಷ ಮುಳುಗಡೆಯಾಗುವ ನದಿತೀರದ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read