ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಲ್ಲಿ “ಕಪ್ಪೆ ಚಿಪ್ಪು” ತೆಗೆಯಲು ಹೋಗಿ ಸಂಭವಿಸಿದ ದುರಂತದ ಮಾಹಿತಿ:
ಭಟ್ಕಳ ತಾಲೂಕಿನ ತಟ್ಟಿಹಕ್ಲು ಸಮೀಪ ವೆಂಕಟಾಪುರ ನದಿಯಲ್ಲಿ ಈ ದುರಂತ ಸಂಭವಿಸಿದೆ.
ಒಂದೇ ಕುಟುಂಬದ 14 ಜನರು ಕಪ್ಪೆ ಚಿಪ್ಪು ತೆಗೆಯಲು ನದಿಗೆ ಇಳಿದಿದ್ದರು. ಅದರಲ್ಲಿ 10 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, 3 ಜನ ನಾಪತ್ತೆಯಾಗಿದ್ದಾರೆ. 1 ಜನರನ್ನು ರಕ್ಷಿಸಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರೆಲ್ಲರೂ ಶಿರಾಲಿಯ ಸಾರದಹೊಳೆ ಮೂಲದವರು ಮತ್ತು ಒಂದೇ ಕುಟುಂಬಕ್ಕೆ ಸೇರಿದವರು.
ಕರಾವಳಿ ಭಾಗದಲ್ಲಿ ಸಿಗುವ ಒಂದು ಬಗೆಯ ಸೀ-ಫುಡ್/ಸಮುದ್ರ ಚಿಪ್ಪು. ಅಂಕೋಲಾ, ಭಟ್ಕಳ ಭಾಗದಲ್ಲಿ ಮಳೆಗಾಲದಲ್ಲಿ ಹೇರಳವಾಗಿ ಸಿಗುತ್ತೆ. ಇದನ್ನು ಸಂಗ್ರಹಿಸಿ ಮಾರಾಟ ಮಾಡಿ ಸ್ಥಳೀಯರು ಆದಾಯ ಗಳಿಸುತ್ತಾರೆ. ಮಹಿಳೆಯರು-ಪುರುಷರು ಹಿಂಡು ಹಿಂಡಾಗಿ ತೆಗೆಯಲು ಹೋಗ್ತಾರೆ.
ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮತ್ತು ಸ್ಥಳೀಯರಿಂದ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಳೆಗಾಲ ಇರೋದ್ರಿಂದ ನೀರಿನ ಮಟ್ಟ ಹೆಚ್ಚಿದ್ದು, ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿತ್ತು.

