ಆಂಧ್ರಪ್ರದೇಶದ ತಿರುಮಲದಲ್ಲಿರುವ ಪ್ರಸಿದ್ಧ ತಿರುಮಲ ವೆಂಕಟೇಶ‍್ವರ ದೇವಾಲಯಕ್ಕೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಪತ್ನಿ ಉಷಾ ಶಿವಕುಮಾರ್, ಅಳಿಯ, ಮಗ ಕೂಡ ಇದ್ದರು.
ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬ ಸಮೇತ ದೇವಾಲಯಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ಇತ್ತೀಚೆಗೆ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆತ ರಾಜಕೀಯ ಯಶಸ್ಸಿನ ಹಿನ್ನೆಲೆಯಲ್ಲಿ ಶ್ರೀವಾರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ರಾಜ್ಯದ ಅಭಿವೃದ್ಧಿ, ಜನರ ಸುಖ-ಶಾಂತಿ ಹಾಗೂ ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ದೇವಸ್ಥಾನದ ಆಡಳಿತ ಮತ್ತು ವ್ಯವಸ್ಥೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಲಯದ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ದಂಪತಿಗೆ ಸಾಂಪ್ರದಾಯಿಕ ಗೌರವ ನೀಡಿ ಶ್ರೀವಾರಿ ತೀರ್ಥ-ಪ್ರಸಾದ ವಿತರಿಸಿದರು.
ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ ; ಸಿಎಂ ಡಿಕೆ ಶಿವಕುಮಾರ್
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಡಿಕೆಶಿ ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಇಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ಮಳವಳ್ಳಿ ಶಿವಣ್ಣ, ಶ್ರೀ ಪಿ.ವಿ. ಮೋಹನ್, ಶ್ರೀ ವಿನಯ್ ಕಾರ್ತಿಕ್ ಹಾಗೂ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನಸೌಧದಲ್ಲಿ ಅಭಿನಂದಿಸಿ, ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಪಸ್ಥಿತರಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ. ನಾವು ಯಾವ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದ್ದೇವೆಯೋ ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರೂ ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ನಮಗೆ ಹೆಚ್ಚಿನ ಮತ ನೀಡಿದ ಬೇರೆ ಬೇರೆ ಪಕ್ಷದ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನೀವು ನಮಗೆ ನೀಡಿದ ವಿಶ್ವಾಸ ಜನರಿಗೆ ನೀಡಿದ ಶಕ್ತಿ. ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು. ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಇದಕ್ಕೆ ದುಡಿದಂತಹ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಾಗೂ ಇತರೇ ಕಾರ್ಯದರ್ಶಿಗಳನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷದಿಂದ ಐದು ಅಭ್ಯರ್ಥಿಗಳು ನಿಂತಿದ್ದರು. ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದು ಜನ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು – ಅವರು ಗೆದ್ದಿದ್ದಾರೆ ಎಂದರು.

