HomeKarnatakaತಮ್ಮ ನೇತೃತ್ವದ ಸರ್ಕಾರಕ್ಕೆ ಶತದಿನೋತ್ಸವ ಸಂಭ್ರಮ: ನಾಡಿನ ಜನತೆಗೆ ವಿಶೇಷ ಪತ್ರ ಬರೆದ ಸಿಎಂ ಡಿ.ಕೆ....

ತಮ್ಮ ನೇತೃತ್ವದ ಸರ್ಕಾರಕ್ಕೆ ಶತದಿನೋತ್ಸವ ಸಂಭ್ರಮ: ನಾಡಿನ ಜನತೆಗೆ ವಿಶೇಷ ಪತ್ರ ಬರೆದ ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರಕ್ಕೆ ಇಂದಿಗೆ ನೂರು ದಿನಗಳು. ಈ 100 ದಿನಗಳ ಸೇವೆಯ ಸಂದರ್ಭದಲ್ಲಿ, ನಾಡಿನ ಜನರನ್ನುದ್ದೇಶಿಸಿ ಮುಖ್ಯಮಂತ್ರಿಗಳು ಬರೆದಿರುವ ವಿಶೇಷ ಪತ್ರ ಇಲ್ಲಿದೆ.

“ನಮಸ್ಕಾರ

ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ನನಗೆ ದೊರೆತು ಇಂದಿಗೆ ನೂರು ದಿನಗಳು ಪೂರೈಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನೂರು ದಿನಗಳು ಕೇವಲ ಒಂದು ಅವಧಿಯ ಲೆಕ್ಕವಲ್ಲ. ಕೋಟ್ಯಂತರ ಕನ್ನಡಿಗರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಹೊಣೆಗಾರಿಕೆಯನ್ನು ಇನ್ನಷ್ಟು ಆಳವಾಗಿ, ಗಾಢವಾಗಿ ಅರಿಯುವ ನೂರು ದಿನಗಳಾಗಿವೆ ಎ೦ದೇ ಭಾವಿಸುತ್ತೇನೆ.

ಜನರ ನಂಬಿಕೆ ಮತ್ತು ವಿಶ್ವಾಸದ ಮುಂದೆ ಅಧಿಕಾರ ಚಿಕ್ಕದು. ಜನರ ನಿರೀಕ್ಷೆಗಳ ಮುಂದೆ ಹುದ್ದೆ ಚಿಕ್ಕದು. ನಮ್ಮಮುಂದೆ ಇರುವ ಸವಾಲು, ಜವಾಬ್ದಾರಿ, ಹೊಣೆಗಾರಿಕೆ ಮಾತ್ರ ದೊಡ್ಡದು.

ಸಿದ್ದರಾಮಯ್ಯನವರು ನಮ್ಮ ನಾಡಿಗೆ ಸಾಮಾಜಿಕ ನ್ಯಾಯದ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಸರ್ಕಾರ ಎಂದರೆ ಎಲ್ಲರಿಗಾಗಿ ಇರಬೇಕು, ಅದರಲ್ಲೂ ಶೋಷಿತರ, ದಮನಿತರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎನ್ನುವುದನ್ನು ಅವರು ತಮ್ಮ ಆಡಳಿತದ ಮೂಲಕ ಸಾಧಿಸಿ ತೋರಿಸಿದ್ದಾರೆ. ಇದೇ ಬದ್ಧತೆ ಮತ್ತು ಕಾಳಜಿಯನ್ನು ನಾನೂ ಮುಂದುವರೆಸುತ್ತಿದ್ದೇನೆ.

ನಮ್ಮ ಐದು ಗ್ಯಾರಂಟಿಗಳು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ, ಬದುಕಿಗೆ ನೆಮ್ಮದಿ ಮತ್ತು ಭದ್ರತೆಯನ್ನು ನೀಡಿವೆ.

ಆದರೆ ಸರ್ಕಾರದ ಹೊಣೆಗಾರಿಕೆ ಇಷ್ಟಕ್ಕೇ ಮುಗಿಯುವುದಿಲ್ಲ. ಜನರಿಗೆ ಇಂದು ಏನು ಸಿಕ್ಕಿದೆ ಎನ್ನುವುದಕ್ಕಿಂತ, ನಾಳೆ ಅವರಿಗೆ ಇನ್ನೇನು ಬೇಕು ಎಂಬುದನ್ನು ಅರಿತು ಕೆಲಸ ಮಾಡುವುದು ನಮ್ಮ ದೃಷ್ಟಿಕೋನ ಮತ್ತು ಗುರಿಯಾಗಿದೆ.

ಈ ಮೊದಲ ನೂರು ದಿನಗಳಲ್ಲಿ ಆ ದಿಕ್ಕಿನಲ್ಲಿ ನಾವು ಹಲವು ಗಟ್ಟಿ ಹೆಜ್ಜೆಗಳನ್ನು ಇಟ್ಟಿದ್ದೇವೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳು, ₹29,679 ಕೋಟಿ ಮೊತ್ತದ ಹೂಡಿಕೆಗಳಿಗೆ ಅನುಮೋದನೆ ದೊರೆತಿದ್ದು, ಇದರಿಂದ ಸುಮಾರು 66,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು 10,000 ಭಾರತ್ ಜೋಡೋ ಯುವ ಸಂಘಗಳು, ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿಶ್ವವಿದ್ಯಾಲಯ, 6ನೇ ತರಗತಿಯಿಂದಲೇ AI ಶಿಕ್ಷಣ, ಮೋಡ ಬಿತ್ತನೆ (Cloud Seeding), ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ, ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಹಾಗೂ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ನನ್ನ ನೇರ ಮೇಲ್ವಿಚಾರಣೆಯಲ್ಲಿ ‘ಪ್ರಜಾ ಸೇವೆ’ ಇಲಾಖೆಯ ಸ್ಥಾಪನೆಯಾಗಿದೆ.

ಇವೆಲ್ಲ ಯೋಜನೆಗಳಿಗೂ ಬಹಳ ಬದ್ಧತೆಯಿಂದ ಈ ನೂರು ದಿನಗಳಲ್ಲಿ ಚಾಲನೆ ನೀಡಲು ನಮಗೆ ಸಾಧ್ಯವಾಗಿದೆ. ಇವನ್ನೆಲ್ಲಾ ನಾನು ಸಾಧನೆಗಳ ಪಟ್ಟಿ ಎಂದು ಹೇಳುತ್ತಿಲ್ಲ. ಇವೆಲ್ಲವೂ ಮುಂದೆ ಸಾಗಬೇಕಾಗಿರುವ ಹಾದಿಗೆ ದಿಕ್ಯೂಚಿಗಳಾಗಿವೆ.

ಜನತೆಯ ನಿರೀಕ್ಷೆಗಳು ದೊಡ್ಡವು ಎಂಬುದು ನನಗೆ ಗೊತ್ತಿದೆ.

ಅವು ದೊಡ್ಡದಾಗಿಯೇ ಇರಬೇಕು. ನಮ್ಮ ಸರ್ಕಾರ ಜನತೆಯ ಧ್ವನಿಯನ್ನು, ಜನರ ಕೂಗನ್ನು ವಿನಮ್ರತೆಯಿಂದ ಕೇಳಿಸಿಕೊಳ್ಳುತ್ತದೆ. ಜನತೆಯ ಸಾಮೂಹಿಕ ಬೇಡಿಕೆ ಮತ್ತು ಸಲಹೆಗಳನ್ನು ಸದಾ ಮುಕ್ತವಾಗಿ ಸ್ವೀಕರಿಸುತ್ತದೆ ಮತ್ತು ಪೂರಕವಾಗಿ ವರ್ತಿಸುತ್ತದೆ, ಜನತೆಗೆ ಇಷ್ಟವಿಲ್ಲದ್ದನ್ನು ಮುಲಾಜಿಲ್ಲದೆ ಹಿಂದಕ್ಕೆ ಪಡೆಯುತ್ತದೆ ಎನ್ನುವುದನ್ನು ನಮ್ಮ ಸರ್ಕಾರ ಸಾಬೀತು ಮಾಡಿದೆ.

ದೃಢ ಕರ್ನಾಟಕ ನನ್ನ ಸಂಕಲ್ಪ. ಸಾಮಾಜಿಕವಾಗಿ, ಆರ್ಥಿಕವಾಗಿ, ಆಧುನಿಕವಾಗಿ ದೃಢವಾದ ಮಾದರಿ ಹೆಜ್ಜೆಗಳನ್ನು ನಾವು ಇಡುತ್ತೇವೆ.

ನನ್ನ ಸರ್ಕಾರದ ಎದುರಿಗೆ ದೊಡ್ಡ ಸವಾಲುಗಳಿವೆ. ನಮ್ಮ ಅನ್ನದಾತರು “ಬರ’ಕ್ಕೆ ಸಿಲುಕಿದ್ದಾರೆ. ಈ ನೂರು ದಿನಗಳ ನಮ್ಮ ನಡೆ ಮುಂದಿನ 500 ದಿನಗಳಲ್ಲಿ ಸಾಗಬೇಕಾದ ಹಾದಿಗೆ ದಿಕ್ಕೂಚಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಹೇಳುತ್ತೇನೆ. ಕರ್ನಾಟಕ ಅವಕಾಶಗಳಿಗಾಗಿ ಕಾಯುವುದಿಲ್ಲ. ಅವಕಾಶಗಳನ್ನು ಸೃಷ್ಟಿಸುತ್ತದೆ

ಆದರೆ, ನಮ್ಮನಾಡಿಗೆ ಪ್ರಗತಿ, ಕಲ್ಯಾಣ ಮತ್ತು ಅಭಿವೃದ್ಧಿಯ ಅದ್ಭುತ ಚರಿತ್ರೆ ಇದೆ. ಎಂಥಾದ್ದೇ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ, ಪರಿಹರಿಸುವ ಚೈತನ್ಯವನ್ನು ನಾನು ನಮ್ಮ ನಾಡಿನ ಚರಿತ್ರೆಯಿಂದ ಒದಗಿಸಿಕೊಳ್ಳುತ್ತೇನೆ. ಇದೇ ನನ್ನ ಮಣ್ಣಿನ ಗುಣ.

ಈ ಬಲವಾದ ನಂಬಿಕೆ ಮತ್ತು ವಿಶ್ವಾಸದಿಂದ ನಮ್ಮ ಸಂಪುಟದ ಪೂರ್ಣ ಸಹಕಾರದೊಂದಿಗೆ ಸವಾಲನ್ನು ಗೆದ್ದು, ಸಾಧಿಸುತ್ತೇವೆ. ನನ್ನ ಉಸಿರಿರುವವರೆಗೂ ಈ ಮಣ್ಣಿನ ಋಣವನ್ನು ತೀರಿಸಲು, ನನ್ನ ಜನರ ಬದುಕನ್ನು ಸುಧಾರಿಸಲು ಶ್ರಮಿಸುತ್ತೇನೆ ಎನ್ನುವ ಸಂಕಲ್ಪ ಹೊಂದಿದ್ದೇನೆ.

ಸದಾ ನಿಮ್ಮ ಸೇವೆಯಲ್ಲಿ,

ಡಿ. ಕೆ. ಶಿವಕುಮಾರ, ಪ್ರಜಾಸೇವಕ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular