ರಾಜಸ್ಥಾನದ ಜೈಪುರ ಗ್ರಾಮಾಂತರ ವ್ಯಾಪ್ತಿಯ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿ ತೀವ್ರ ರಾಜಕೀಯ ವಿವಾದ ಹಾಗೂ ಸಂಘರ್ಷಕ್ಕೆ ಕಾರಣವಾಗಿದ್ದ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಜಿಲ್ಲಾಡಳಿತ ಬುಧವಾರ ನೆಲಸಮ ಮಾಡಿದೆ. ಇದರ ಬೆನ್ನಲ್ಲೇ ಅದೇ ಸ್ಥಳದಲ್ಲಿ ₹18 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ನೂತನ ಶಾಲಾ ಕಟ್ಟಡ ನಿರ್ಮಿಸುವುದಾಗಿ ರಾಜಸ್ಥಾನ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಈ ಶಾಲೆಯ ದುಸ್ಥಿತಿಯನ್ನು ಪ್ರಶ್ನಿಸಿ ‘ಸಿಜೆಪಿ’ (CJP) ಸಂಘಟನೆಯು ‘ಸ್ಕೂಲ್ ಟೀಕ್ ಕರೋ’ ಅಭಿಯಾನದಡಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರಿ ಹಲ್ಲೆ, ಕಲ್ಲು ತೂರಾಟ ಹಾಗೂ ರಾಜಕೀಯ ಘರ್ಷಣೆ ನಡೆದಿತ್ತು. ಈ ಘಟನೆಯ ತೀವ್ರತೆಯ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಇದೀಗ ಶಾಲೆಯ ಪುನರ್ನಿರ್ಮಾಣಕ್ಕೆ ಮುಂದಾಗಿದೆ.
ಅಧಿಕಾರಿಗಳ ಸಮ್ಮುಖದಲ್ಲೇ ಕಟ್ಟಡ ನೆಲಸಮ: ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಈ ಹಳೆಯ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಯಿತು. ಈ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಕ್ಕಳಿಗೆ ತೀರಾ ಅಪಾಯಕಾರಿ ಎಂದು 2025ರ ತಾಂತ್ರಿಕ ಸಮೀಕ್ಷೆಯಲ್ಲೇ ದೃಢಪಟ್ಟಿತ್ತು. ಬಳಿಕ ಇದನ್ನು ಬಳಕೆಯಿಂದ ಹೊರಗಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಲೆಯು ದನ-ಕರುಗಳನ್ನು ಕಟ್ಟುವ ಕೊಟ್ಟಿಗೆಯಲ್ಲೇ ತಾತ್ಕಾಲಿಕವಾಗಿ ನಡೆಯುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಹೊಸ ಕಟ್ಟಡಕ್ಕೆ ₹18 ಲಕ್ಷ ಅನುದಾನ: ಶಾಲೆಯ ದುಃಸ್ಥಿತಿಯ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿದ್ದಂತೆಯೇ ರಾಜಸ್ಥಾನ ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ₹18 ಲಕ್ಷ ಬಿಡುಗಡೆ ಮಾಡಿದೆ:
ಆಗಸ್ಟ್ 21ರಂದು ನಡೆದಿದ್ದೇನು? ಸರ್ಕಾರಿ ಶಾಲೆಗಳ ದುಸ್ಥಿತಿ ಸರಿಪಡಿಸುವಂತೆ ಆಗ್ರಹಿಸಿ ಸಿಜೆಪಿ ತಂಡವು ಆಗಸ್ಟ್ 21ರಂದು ರಾಂಪುರ ಗ್ರಾಮದ ಈ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗಂಭೀರ ಸಂಘರ್ಷಕ್ಕೆ ತಿರುಗಿತ್ತು. ಈ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿ, ವಾಹನಗಳ ಗಾಜು ಪುಡಿಮಾಡಲಾಗಿದೆ ಎಂದು ಸಿಜೆಪಿ ಆರೋಪಿಸಿದರೆ, ಹೊರಗಿನಿಂದ ಬಂದು ಗ್ರಾಮದಲ್ಲಿ ಶಾಂತಿ ಕದಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು.
ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು: ಸಿಜೆಪಿ ಘಟನೆಯಲ್ಲಿ ಗಾಯಗೊಂಡಿದ್ದ ಸಿಜೆಪಿ ಮುಖಂಡ ಅಶುತೋಷ್ ರಾಂಕಾ ಅವರು ಕಟ್ಟಡ ಧ್ವಂಸಗೊಳಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
“ದನಗಳ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಅದೇ ರಾಂಪುರ ಶಾಲೆಗೆ ಈಗ ಕೊನೆಗೂ ಹೊಸ ರೂಪ ಸಿಗುತ್ತಿದೆ. ನಾವು ಪರಿಶೀಲನೆಗೆ ಹೋದಾಗ ಕಲ್ಲು ತೂರಲಾಯಿತು, ಮಹಿಳೆಯರ ಮೇಲೂ ಹಲ್ಲೆ ನಡೆಸಿ ಕಾರುಗಳ ಗಾಜು ಪುಡಿಮಾಡಲಾಗಿತ್ತು. ಆದರೆ ನಮ್ಮ ಈ ಸಂಕಷ್ಟದಿಂದ ನಮ್ಮ ಮಕ್ಕಳಿಗೆ ಉತ್ತಮ ಶಾಲಾ ಕಟ್ಟಡ ಸಿಗುವುದಾದರೆ ನಾವು ಪಟ್ಟ ಕಷ್ಟ ಸಾರ್ಥಕ,” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

